17 December , 2017 Sunday

COASTAL NEWS

COASTAL NEWS

Archive for the ‘Editorial’ Category

ಬಣ್ಣ ಕಳೆದುಕೊಂಡ ಮೋದಿ ಭಾಷಣ

By varthabharathi On August - 17 - 2015 ADD COMMENTS

ಪ್ರಧಾನಿ ನರೇಂದ್ರ ಮೋದಿಯವರು 2ನೆ ಬಾರಿ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕಳೆದ ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ಅವರದು ಮೊದಲ ಭಾಷಣ. ಅಂದಿನ ಭಾಷಣವನ್ನು ಮೀಡಿಯಾ ವರ್ಣರಂಜಿತವಾಗಿ ದೇಶದ ಮುಂದಿಟ್ಟಿತ್ತು. ಅವರ ಮಾತುಗಳಲ್ಲಿ ಪೊಸಿಟಿವ್ ಎನರ್ಜಿಯಿತ್ತು ಎಂದು ಮಾಧ್ಯಮಗಳು ವಾಸ್ತು ಭವಿಷ್ಯಕಾರರಂತೆ ಬಣ್ಣಿಸಿದ್ದವು. ಮೋದಿ ಅಭಿಮಾನಿಗಳು ಅವರ ಮಾತಿಗೆ ರೋಮಾಂಚನಗೊಂಡಿದ್ದರು. ಆದರೆ ಅವರ ಮಾತುಗಳಲ್ಲಿ ರೋಚಕತೆಗಳಿದ್ದವೇ ಹೊರತು ತಳಮಟ್ಟದ ಯಾವ ಯೋಜನೆಗಳೂ ಇದ್ದಿರಲಿಲ್ಲ. ಮೇಕ್ ಇನ್ ಇಂಡಿಯಾದಂತಹ ಕನಸುಗಳಲ್ಲಿ ಯಾವ ಸ್ವದೇಶಿತನವೂ ಇದ್ದಿರಲಿಲ್ಲ. ಅವರ ಮಾತುಗಳಲ್ಲಿ ರೋಚಕತೆಗಳಿದ್ದವೇ ಹೊರತು, ಕ್ರಿಯೆಗಳಿರಲಿಲ್ಲ. ಒಂದು ರೀತಿಯಲ್ಲಿ ದೇಶಕ್ಕೆ ಬುದ್ಧಿವಾದವನ್ನು ಕೆಂಪುಕೋಟೆಯಲ್ಲಿ ನಿಂತು ಹೇಳಿದ್ದರು. ಆದರೂ ಆ ಭಾಷಣ ಸರ್ವರ ಮೆಚ್ಚುಗೆಗೆ ಕಾರಣವಾಗಿತ್ತು. ಮೋದಿ ಅಲೆ ದೇಶಾದ್ಯಂತ ಜೀವಂತವಿದ್ದ ಪರಿಣಾಮ ಅವರ ಪ್ರತಿ ಮಾತುಗಳಲ್ಲಿಯೂ ಜನರು ಭರವಸೆಯಿಟ್ಟರು. ಮೋದಿ ಅದೇನೋ ಬದಲಾವಣೆ ಮಾಡುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ಅವರ ಎರಡನೆ ಕೆಂಪುಕೋಟೆಯ ಭಾಷಣ ಠುಸ್ಸೆಂದಿದೆ. ತನ್ನ ಅದೇ ಸವಕಲು ಅಬ್ಬರದಲ್ಲಿ ಭಾಷಣವನ್ನು ಮಾಡಿ ಮುಗಿಸಿದ್ದಾರಾದರೂ, ಸ್ವತಃ ಬಿಜೆಪಿ ಕಾರ್ಯಕರ್ತರನ್ನು ಸೆಳೆಯುವಲ್ಲೂ ಅವರು ವಿಫಲರಾದರು. ತನ್ನೆಲ್ಲ ವೈಫಲ್ಯಗಳನ್ನು, ತನ್ನೆಲ್ಲ ಜನವಿರೋಧಿ ಕಾನೂನುಗಳನ್ನು ಧನಾತ್ಮಕವಾಗಿ ಮಂಡಿಸಲು ಹೊರಟು ವಿಫಲರಾಗಿದ್ದಾರೆ. ಒಂದು ವರ್ಷದಲ್ಲಿ ತಾನೇನು ಮಾಡಿದ್ದೇನೆ ಎನ್ನುವುದನ್ನು ಅವರು ಗಂಟಲು ಹರಿದು ಹೇಳಿದರಾದರೂ, ಅದು ದೇಶದ ಜನಮನವನ್ನು ಮುಟ್ಟುವಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ. ಈ ಬಾರಿ ಮೋದಿಯ ಭಾಷಣ ಚರ್ಚೆಯಾಗಲಿಲ್ಲ ಎನ್ನುವುದೇ ಚರ್ಚೆಗೆ ವಸ್ತುವಾದುದು ವಿಶೇಷ.ಈ ಬಾರಿಯ ಸ್ವಾತಂತ್ರೋತ್ಸವಕ್ಕೆ ಒಂದು ರೀತಿಯ ವಿಷಾದ ಆವರಿಸಿತ್ತು. ಕಳೆದ ಕೆಲವು ದಿನಗಳಿಂದ ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲಗಳು, ಪೋಲಾದ ಕಲಾಪಗಳೇ ಆ ವಿಷಾದಕ್ಕೆ ಕಾರಣ. ಇಡೀ ದೇಶ ಸಂಸತ್ತನ್ನು ಬೆಕ್ಕಸಬೆರಗಾಗಿ ನೋಡುತ್ತಿತ್ತು. ಒಂದೆಡೆ ವಿರೋಧ ಪಕ್ಷಗಳು ಭ್ರಷ್ಟಾಚಾರ ಆರೋಪಕ್ಕಾಗಿ ಸುಷ್ಮಾ ಸ್ವರಾಜ್ ಮತ್ತು ಅವರ ಸಂಗಡಿಗರ ರಾಜೀನಾಮೆಯನ್ನು ಕೇಳುತ್ತಿದ್ದರೆ, ಸರಕಾರ ಜಪ್ಪಯ್ಯ ಎಂದರೂ ಅದಕ್ಕೆ ಒಪ್ಪಿರಲಿಲ್ಲ. ಜೊತೆಗೆ ಸುಷ್ಮಾ ಸ್ವರಾಜ್ ಯಾವ ಮುಜುಗರವೂ ಇಲ್ಲದೆ ಸಂಸತ್ತಿನಲ್ಲಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡರು. ಕೆಂಪುಕೋಟೆಯಲ್ಲಿ ಆ ಕುರಿತಂತೆ ಏನಾದರೂ ವಿವರಗಳು ಹೊರಬೀಳಬಹುದೋ ಎಂಬ ಆಸೆ ಜನರದಾಗಿತ್ತು. ಆದರೆ ಅವರು ತನ್ನ ಭಾಷಣದಲ್ಲಿ, ತಾನು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇನೆ ಎಂದು ದೇಶದ ಜನರನ್ನು ನಂಬಿಸಲು ಯತ್ನಿಸಿದರು. ಅವರ ಭಾಷಣವೇ ಒಂದು ವಿಡಂಬನಾ ರೀತಿಯಲ್ಲಿತ್ತು. ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಅವರ ಲಲಿತ್ ಗೇಟ್ ಹಗರಣ ಮತ್ತು ಚೌಹಾಣ್ ಅವರ ವ್ಯಾಪಂ ಹಗರಣ ದೇಶದ ಮುಖಕ್ಕೆ ರಾಚುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇನೆ ಎಂಬ ಮೋದಿಯ ಮಾತು ಒಂದು ಅಣಕವೇ ಆಗಿತ್ತು. ದೇಶದ ಜನರು ತಲೆತಗ್ಗಿಸಿಕೊಂಡು ಅದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಇಬ್ಬಗೆಯ ಗೊಂದಲ ಕೇವಲ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮಾತ್ರ ಆಗಿರಲಿಲ್ಲ. ಕೋಮುವಾದದ ವಿರುದ್ಧವೂ ಅವರು ಮಾತನಾಡಿದರು. ‘ಜಾತಿವಾದ ಮತ್ತು ಕೋಮುವಾದಗಳಿಗೆ ಈ ದೇಶದಲ್ಲಿ ಸ್ಥಾನವಿಲ್ಲ. ಈ ಸಾಮಾಜಿಕ ಪಿಡುಗುಗಳನ್ನು ಅಭಿವೃದ್ಧಿಯ ಮೂಲಕ ತೊಡೆದು ಹಾಕಬೇಕು’ ಎನ್ನುವ ಗೊಂದಲಗಳ ಹೇಳಿಕೆಯನ್ನು ನೀಡಿದರು. ಕೋಮುವಾದ, ಜಾತಿವಾದ ನಿವಾರಣೆಯಾದರೆ ಅಭಿವೃದ್ಧಿಯಾಗುತ್ತದೆಯೋ ಅಥವಾ ಅಭಿವೃದ್ಧಿಯಾಗುವ ಮೂಲಕ ಕೋಮುವಾದ ನಿವಾರಣೆಯಾಗುತ್ತದೆಯೋ ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟತೆಯಿರಲಿಲ್ಲ. ಕಳೆದ ವರ್ಷದ ಭಾಷಣದಲ್ಲಿ ‘‘ಕೋಮುಹಿಂಸೆ ದೇಶದಲ್ಲಿ ತಾಂಡವವಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ’’ ಎಂಬ ಹೇಳಿಕೆಯನ್ನು ಇದೇ ಮೋದಿಯವರು ನೀಡಿದ್ದರು. ಹೀಗೆ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಮೀರತ್, ದಿಲ್ಲಿ, ಅಸ್ಸಾಂ ಸೇರಿದಂತೆ ಹಲವೆಡೆ ಕೋಮುಗಲಭೆ ಭುಗಿಲೆದ್ದಿತು. ‘ಮರಳಿ ಮಾತೃಧರ್ಮಕ್ಕೆ’ ಎಂಬ ಹೆಸರಿನಲ್ಲಿ ಸಂಘಪರಿವಾರ ನಡೆಸುತ್ತಿರುವ ದಾಂಧಲೆಗಳನ್ನು ಮೋದಿ ವೌನವಾಗಿ ವೀಕ್ಷಿಸತೊಡಗಿದರು. ಇದೀಗ ಮತ್ತೆ ಅದೇ ಕೆಂಪುಕೋಟೆಯಲ್ಲಿ, ಅದೇ ಸವಕಲು ಮಾತುಗಳನ್ನು ಆಡಿದರೆ ಅದು ಕೇಳುವವರ ಎದೆಯೊಳಗೆ ಹೊಸತನ್ನು ಸೃಷ್ಟಿಸುವುದಾದರೂ ಹೇಗೆ?

ಕನಿಷ್ಠ ಸೈನಿಕರ ಸಮಾನ ಶ್ರೇಣಿ, ಸಮಾನ ಪಿಂಚಣಿಯ ಬೇಡಿಕೆಯ ಬಗ್ಗೆಯಾದರೂ ಒಂದು ಸ್ಪಷ್ಟ ನಿರ್ಧಾರವನ್ನು ತಳೆದು ಅವರು ಕೆಂಪುಕೋಟೆಯ ಮೆಟ್ಟಿಲನ್ನು ತುಳಿಯುತ್ತಾರೆ ಎಂದು ಜನರು ಭಾವಿಸಿದ್ದರು. ಆದರೆ ಆ ಕುರಿತಂತೆಯೂ ಒಂದು ಸ್ಪಷ್ಟ ಭರವಸೆಯನ್ನು ಅವರಿಗೆ ನೀಡಲಾಗಲಿಲ್ಲ ‘‘ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜದ ಅಡಿಯಲ್ಲಿ ನಾನು ಮಾಜಿ ಸೈನಿಕರಿಗೆ ಆಶ್ವಾಸನೆಯೊಂದನ್ನು ನೀಡಬಯಸುತ್ತೇನೆ. ಅವರ ಬೇಡಿಕೆಯನ್ನು ನಾವು ತಾತ್ವಿಕವಾಗಿ ಒಪ್ಪಿಕೊಂಡಿದ್ದೇವೆ. ಈ ಕುರಿತು ಕೆಲವು ಮಾತುಕತೆಗಳು ನಡೆದಿವೆ. ಈ ಮಾತುಕತೆಯ ನಡುವೆ ನಾನು ಒಳಿತನ್ನು ನಿರೀಕ್ಷಿಸುತ್ತಿದ್ದೇನೆ’’ ಒಬ್ಬ ಪ್ರಧಾನಿಯಾದವರು ಹೀಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟು ಮಾತನಾಡುತ್ತಿದ್ದರೆ ಅದನ್ನು ನಿವೃತ್ತ ಸೈನಿಕರು ಏನೆಂದು ಅರ್ಥೈಸಿಕೊಳ್ಳಬೇಕು? ‘ಸ್ಟಾರ್ಟ್ ಅಪ್; ಸ್ಟಾಂಡ್ ಅಪ್ ಇಂಡಿಯಾ’ ಎಂಬ ಅಭಿಯಾನಕ್ಕೆ ಅವರು ಚಾಲನೆ ನೀಡಿದ್ದಾರೆ. ಅದರೆ ಆ ಅಭಿಯಾನದ ಸ್ಪಷ್ಟ ಗುರಿ ಸ್ವತಃ ಮೋದಿಗೂ ಗೊತ್ತಿಲ್ಲ. ಪ್ರತಿಯೊಂದು ಬ್ಯಾಂಕ್ ಶಾಖೆ ಕಡೇ ಪಕ್ಷ ಒಬ್ಬ ದಲಿತ ಇಲ್ಲವೇ ಒಬ್ಬ ಆದಿವಾಸಿ ಸ್ಟಾರ್ಟ್ ಅಪ್‌ಗೆ ಸಾಲ ಒದಗಿಸಬೇಕು’ ಎಂದು ಕರೆ ನೀಡುತ್ತಿದ್ದಾರೆ. ಆದರೆ ದೇಶದ ಆರ್ಥಿಕ ನೀತಿಯಿಂದ ರೈತರು ಮತ್ತು ಆದಿವಾಸಿಗಳು ಸಂಪೂರ್ಣ ಬೀದಿಪಾಲಾಗಿರುವಾಗ, ಬ್ಯಾಂಕುಗಳು ಯಾವ ಆಧಾರದ ಮೇಲೆ ರೈತರಿಗೆ ಸಾಲ ನೀಡುತ್ತಿವೆ. ಮೋದಿ ಕೆಂಪುಕೋಟೆಯಲ್ಲಿ ನಿಂತು ಕರೆ ನೀಡಿದರು ಎಂಬ ಒಂದೇ ಕಾರಣಕ್ಕಾಗಿ ಬ್ಯಾಂಕುಗಳು ರೈತರಿಗೆ ಸಾಲಕೊಡುತ್ತವೆಯೇ? ಬಡವರನ್ನು ಮೇಲೆತ್ತಲು ಯಾವ ಕಾರ್ಯಕ್ರಮಗಳನ್ನೂ ಘೋಷಿಸದೆ ‘ಯಾರೂ ಬಡವರಾಗಿಯೇ ಉಳಿಯಲು ಬಯಸುವುದಿಲ್ಲ. ಅದರಿಂದ ಹೊರಬರಲು ಪ್ರಯತ್ನಿಸುತ್ತಾರೆ’ ಎಂಬ ಹೇಳಿಕೆಯಲ್ಲಿ ಬಡವರ ಪರವಾಗಿ ಏನಿದೆ? ಬರೇ ಮಾತುಗಳಲ್ಲೇ ಜನರನ್ನು ಗೊಂದಲಕ್ಕೆ ತಳ್ಳಿ ತಮ್ಮ ಭಾಷಣವನ್ನು ಮುಗಿಸಿ, ದುಬೈಗೆ ಹಾರಿದ್ದಾರೆ.ಒಂದಂತೂ ಸ್ಪಷ್ಟ. ಮೋದಿಯ ಒಂದು ವರ್ಷದ ಆಡಳಿತದಲ್ಲಿ ದೇಶ ಸಂಪೂರ್ಣ ಉದ್ಯಮಿಗಳ, ಹಣವುಳ್ಳವರ ಕೈವಶವಾಗಿವೆ. ಅಮೆರಿಕವೂ ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಭಾರತದ ಮೇಲೆ ಇನ್ನಷ್ಟು ಹೆಚ್ಚು ಹಿಡಿತ ಸಾಧಿಸಿವೆ. ಬಡವರ, ರೈತರ ಹಿತಾಸಕ್ತಿಗಳು ಸಂಪೂರ್ಣ ಬದಿಗೆ ತಳ್ಳಲ್ಪಟ್ಟಿದ್ದು, ಬೃಹತ್ ವಿದೇಶಿ ಕಂಪೆನಿಗಳಿಗಾಗಿ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಸರಕಾರವೇ ಮುಂದೆ ನಿಂತು ಕಾನೂನು ರೂಪಿಸುತ್ತಿದೆ. ದೇಶದ ಜನರಿಗೆ ಇದು ದಿನೇ ದಿನೇ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ. ಕೆಂಪು ಕೋಟೆಯಲ್ಲಿ ನಿಂತು ಮೋದಿ ಆಡಿದ ಮಾತುಗಳು ಇದಕ್ಕೆ ಪುಷ್ಟಿ ನೀಡಿವೆ.

ಮೊಬೈಲ್ ಬಳಕೆ- ನಿಯಂತ್ರಣ ಅತಿಮುಖ್ಯ

By admin On February - 11 - 2014 ADD COMMENTS

 

ರಾತ್ರಿ ಮಲಗಿ ಬೆಳಿಗ್ಗೆ ಎದ್ದ ತಕ್ಷಣ ಆಯಾಸ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ನಿದ್ರೆಸರಿಯಾಗಿ ಬರುತ್ತಿಲ್ಲ ಅದಕ್ಕೆ ಕಾರಣ ಏನು ಗೊತ್ತೆ? ಸುತ್ತಮುತ್ತಲಿನ ಶಬ್ದವೇ? ಖಂಡಿತಾ ಅಲ್ಲ!

ಇದಕ್ಕೆ ಕಾರಣ, ನಿಮ್ಮ ಮೊಬೈಲ್ ಫೋನ್! ಹೌದು, ಪ್ರತಿನಿಮಿಷ ನಿಮ್ಮ ಸಂಗಾತಿಯಾಗಿರುವ ಮೊಬೈಲ್ ನಿದ್ರೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ನಿದ್ರೆ ಮಾಡುವ ಸಮಯದಲ್ಲೂ ಮೆಸೇಜ್ ಮಾಡುತ್ತಾ ಸ್ಕ್ರೀನನ್ನೇ ಅತಿಯಾಗಿ ನೋಡುವ ಕಾರಣ ನಿದ್ರೆಯ ಸಮಸ್ಯೆ ಉಂಟಾಗುತ್ತವೆ. ಅದೇ ರೀತಿ ಹೆಡ್‌ಫೋನ್‌ಗಳನ್ನು ಇಟ್ಟು ಹಾಡು ಕೇಳುವುದು. ಗೇಮ್ ಆಡುವುದು, ವಿಡಿಯೋವನ್ನು ನೋಡುವುದರಿಂದ ನಿದ್ರೆ ಸರಿಯಾಗಿ ಬಾರದು. ಹೀಗಾಗಿ ಆಫೀಸ್‌ನಲ್ಲೂ ಉತ್ಸಾಹದಿಂದ ಇರಲಾಗುವುದಿಲ್ಲ. ಕೆಲಸ ಮಾಡಿ ಸುಸ್ತಾದಾಗ ನಿದ್ರೆ ಅವಶ್ಯಕ. ಆದರೆ ಮೊಬೈಲನ್ನು ಮಲಗುವ ಹೊತ್ತಿನಲ್ಲೂ ಬಿಡದೆ ಬಳಸುತ್ತಿದ್ದರೆ ನಿದ್ರೆ ಬರುವುದಿಲ್ಲ.

ದಿನನಿತ್ಯದ ಕೆಲಸದಿಂದ ಹಿಡಿದು ಕಷ್ಟ-ಸುಖಗಳಿಗೆ, ನಮ್ಮ ಭಾವನೆ-ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುವವರಿಗೂ ತಾಳ್ಮೆ ಇರುವುದಿಲ್ಲ. ಕರೆ ಮಾಡಿ ಹೇಳಲು ಸಾಧ್ಯವಿಲ್ಲದಿದ್ದಾಗ, ಎಸ್‌ಎಮ್‌ಎಸ್‌ನ್ನು ಕಳುಹಿಸುವ ಮೂಲಕ ಮಾಹಿತಿಯನ್ನು ರವಾನೆ ಮಾಡಿದಾಗಲೇ ರಿಲೀಫ್ ಸಿಗುವುದು. ಮೊಬೈಲ್ ಸಂವಹನದ ಕೊಂಡಿಯಾಗಿದೆ ನಿಜ, ಆದರೆ ಮೊಬೈಲ್ ಬಳಕೆ ಅಧಿಕಗೊಂಡಂತೆ, ಸಮಸ್ಯೆ ಹೆಚ್ಚಾಗುತ್ತಿದೆ. ನಿದ್ರೆ ಆರೋಗ್ಯಕ್ಕೆ ಬಹುಮುಖ್ಯ. ಅದು ದೇಹದ ಆಯಾಸವನ್ನು ಕಡಿಮೆ ಮಾಡುವುದು. ಆರೋಗ್ಯವು ಸರಿಯಾದ ನಿದ್ರೆಯಿಂದಲೇ ಸಿಗುವುದು. ಯಾವಾಗಲು ಆ್ಯಕ್ಟೀವ್ ಮತ್ತು ಅಲರ್ಟ್ ಆಗಿರಲು ನಿದ್ರೆ ಅನಿವಾರ್ಯ. ಹಾಗಂತ ಮೊಬೈಲ್ ಬಳಸದೆ ಇರಲು ಸಾಧ್ಯವಿಲ್ಲ. ಅದನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ.

ಈ ಕೆಳಗಿನ ಸಲಹೆಯನ್ನು ಪಾಲಿಸಿ…
* ಮಲಗುವ ಮುಂಚೆ ಮೊಬೈಲನ್ನು ಕಡಿಮೆ ಬಳಸಿ.

* ನಿದ್ರೆ ಮಾಡುವಾಗ ಮೊಬೈಲನ್ನು ದೂರವಿಡಿ.

* ಚಾಟ್ ಮಾಡುವ ಸಮಯವನ್ನು ಕಡಿತಗೊಳಿಸಿ.

* ಅತಿಯಾಗಿ ಫೋನ್ ಸ್ಕ್ರೀನ್ ವೀಕ್ಷಿಸುವುದನ್ನು ಕಡಿಮೆ ಮಾಡಿ.

* ಕಿವಿಗೆ ಒತ್ತುವಂತೆ ಮೊಬೈಲ್‌ನಲ್ಲಿ ಮಾತನಾಡದಂತೆ ಗಮನವಹಿಸಿ.

* ನಿಗದಿತ ಸಮಯದಲ್ಲಿ ಮಾತ್ರ ಗೇಮ್ ಆಡಿ.

* ಹಾಡುಗಳನ್ನು ಕೇಳಿ. ಆದರೆ, ಸದಾ ಕಿವಿಗೆ ಹಿಯರ್ ಫೋನ್ ಸಿಕ್ಕಿಸಿಕೊಳ್ಳಬೇಡಿ.

ಮುಝಫ್ಫರ್‌ನಗರದಲ್ಲಿ ಬೆಳಕಿಗೆ ಬಾರದ ಮಾನವೀಯ ವೌಲ್ಯಗಳ ಕತೆಗಳು

By varthabharathi On November - 17 - 2013 ADD COMMENTS

ಮುಝಫ್ಫರ್‌ನಗರ: ಗಲಭೆಯ ದಿನಗಳಲ್ಲಿ ಮುಸ್ಲಿಮರಿಗೆ ಆಶ್ರಯ ನೀಡಿದ ಜಾಟರು
ಮುಝಫ್ಫರ್‌ನಗರ, ನ. 16: ಬಸ್ ಕಿಟಿಕಿಯ ಗಾಜುಗಳು ಪುಡಿಪುಡಿಯಾಗಿದ್ದವು. ಅಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಂಗಡಿಗಳ ಬಾಗಿಲುಗಳು ಮುಚ್ಚಿದ್ದವು. ಹೀಗೆ ಯಾಕೆಂದು ಊಹಿಸಲು ಕಷ್ಟವೇನಿಲ್ಲ. ಹಿಂದಿನ ರಾತ್ರಿ ಶಾಹ್‌ಪುರ ಮಾರುಕಟ್ಟೆಯಲ್ಲಿ ಒಬ್ಬ ವ್ಯಕ್ತಿಯನ್ನು ಗುಂಡಿಟ್ಟು ಕೊಲೆಗೈದ ಬಳಿಕ ಗುಂಪೊಂದು ದಾಂಧಲೆಗೈದಿತ್ತು.
ಮುಝಫ್ಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಎರಡು ಸಮುದಾಯಗಳ ನಡುವೆ ಹುದುಗಿದ್ದ ದ್ವೇಷದ ಬೆಂಕಿ ಸ್ಫೋಟಿಸಲು ಒಂದು ಸಣ್ಣ ಕಿಡಿ ಸಾಕಿತ್ತು. ನವೆಂಬರ್ 6ರಂದು ಜಾಟ್ ಮತ್ತು ಮುಸ್ಲಿಂ ನಾಯಕರ ನಡುವೆ ನಡೆಯಬೇಕಾಗಿದ್ದ ಸಭೆಯೊಂದು ರದ್ದಾಗಿತ್ತು. ಪ್ರಸ್ತಾಪಿತ ಸಭೆ ಉಭಯ ಸಮುದಾಯಗಳ ನಡುವೆ ಶಾಂತಿ ಏರ್ಪಡಿಸುವ ಪ್ರಯತ್ನಗಳನ್ನು ಮಾಡಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈ ಹೆದರಿಕೆ ಮತ್ತು ಗಾಳಿ ಸುದ್ದಿಗಳ ಕಲುಷಿತ ವಾತಾವರಣಲ್ಲೇ ಇನ್ನೊಂದು ಕತೆಯಿತ್ತು. ಆ ಕತೆ ಹೆಚ್ಚಿನವರಿಗೆ ಗೊತ್ತಿಲ್ಲ. ಆದರೆ ಕತೆಗೆ ಹೆಚ್ಚಿನ ಮಹತ್ವವಿದೆ. ಗಲಭೆ ಆರಂಭದ ದಿನದಿಂದಲೇ ಸಹಬಾಳ್ವೆಯ ಆದರ್ಶವನ್ನು ಅನುಸರಿಸಲು ಪ್ರಯತ್ನಿಸಿದ ಸಾಮಾನ್ಯ ವ್ಯಕ್ತಿಗಳ ಕತೆ ಅದು. ಈ ಪ್ರಯತ್ನಕ್ಕೆ ಅಸಾಧಾರಣ ಧೈರ್ಯ ಬೇಕಾಗಿತ್ತು.
ಸಹಬಾಳ್ವೆಗಾಗಿ ಶ್ರಮಿಸಿದ ಗ್ರಾಮ ಪ್ರಧಾನ
ಗಲಭೆಗ್ರಸ್ತ ಶಾಹ್‌ಪುರದಿಂದ ಕೇವಲ 15 ಕಿ.ಮೀ. ದೂರದಲ್ಲಿದೆ ದುಲ್ಹರ ಗ್ರಾಮ. ಇಲ್ಲಿನ ಪ್ರಧಾನ ಸಂಜೀವ್ ಕುಮಾರ್ ಬಲಿಯಾನ್. ಅವರು ಜಾಟ್ ಸಮುದಾಯಕ್ಕೆ ಸೇರಿದವರು. ಅವರ ಮನೆಯಲ್ಲಿ ಯಾವುದೇ ಸಮಯದಲ್ಲಿ ಮುಸ್ಲಿಮರು ಮತ್ತು ಜಾಟರು ಮಾತುಕತೆ, ಹರಟೆಗಾಗಿ ಸೇರುತ್ತಿದ್ದರು. ಬಲಿಯಾನ್ ಮದುವೆಯಾಗಿಲ್ಲ. ಆದರೆ, ತನಗೆ 7,000ಕ್ಕೂ ಅಧಿಕ ಮಕ್ಕಳಿದ್ದಾರೆ ಎಂದು ಅವರು ಹೇಳುತ್ತಿದ್ದರು. ದುಲ್ಹರ ಗ್ರಾಮದಲ್ಲಿ ಅಷ್ಟು ಜನಸಂಖ್ಯೆಯಿದೆ. ಆ ಪೈಕಿ 3,000 ಜಾಟರು ಮತ್ತು 1,000 ಮುಸ್ಲಿಮರು.
ಎರಡು ತಿಂಗಳ ಹಿಂದೆ ಕೋಮು ಹಿಂಸಾಚಾರ ಮುಝಫ್ಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಯ ಹಳ್ಳಿಗಳಲ್ಲಿ ಭುಗಿಲೆದ್ದಾಗ, ತನ್ನ ಗ್ರಾಮವೂ ಅಪಾಯದಲ್ಲಿದೆ ಎಂಬುದನ್ನು ಬಲಿಯಾನ್ ಮನಗಂಡರು. ಹೊರಗಿನವರು ಯಾರೋ ಗ್ರಾಮದಲ್ಲಿ ಮೋಟರ್‌ಸೈಕಲೊಂದಕ್ಕೆ ಬೆಂಕಿ ಹಚ್ಚಿದ್ದರು.
‘‘ಗಲಭೆ ಮತ್ತು ಹತ್ಯಾಕಾಂಡ ಸೆಪ್ಟಂಬರ್ 8ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿತು. ಹಲವು ಮುಸ್ಲಿಮರು ಸತ್ತಿದ್ದರು ಹಾಗೂ ಈ ಬೆಳವಣಿಗೆಯಿಂದ ಮುಸ್ಲಿಮರು ಭಯಭೀತರಾಗಿದ್ದರು. ಮುಸ್ಲಿಮರಲ್ಲಿ ಭದ್ರತೆಯ ಭಾವನೆ ಹುಟ್ಟಿಸುವುದಕ್ಕಾಗಿ ನಾವು ಹತ್ತು ಮಂದಿ ಸೇರಿ ಮುಸ್ಲಿಂ ಕುಟುಂಬಗಳನ್ನು ನಾನಿರುವ ಸ್ಥಳಕ್ಕೆ ಕರೆತಂದೆವು. ಕೆಲವು ದಿನ ಇಲ್ಲಿದ್ದು ಪರಿಸ್ಥಿತಿ ಶಾಂತವಾದಾಗ ಮನೆಗಳಿಗೆ ವಾಪಸಾಗುವಂತೆ ನಾವು ಅವರಿಗೆ ಹೇಳಿದೆವು’’ ಎಂದು ಸಂಜೀವಕುಮಾರ್ ಬಲಿಯಾನ್ ಹೇಳಿದರು.
ಸೆಪ್ಟಂಬರ್ 8ರಂದು ಗ್ರಾಮ ಪ್ರಧಾನರ ಮಾಲಕತ್ವದ ಕಟ್ಟಡದಲ್ಲಿ 350 ಮುಸ್ಲಿಮರಿಗೆ ಆಶ್ರಯ ನೀಡಲಾಯಿತು ಹಾಗೂ ಅವರಿಗಾಗಿ ಅಲ್ಲೇ ಆಹಾರ ತಯಾರಿಸಲಾಯಿತು. ಇಂಥದೆ ವ್ಯವಸ್ಥೆಯನ್ನು ಜಾಟರ ಒಡೆತನದ ನಾಲ್ಕು ಮನೆಗಳಲ್ಲೂ ನಡೆಸಲಾಯಿತು.
ಆದಾಗ್ಯೂ, ಮುಸ್ಲಿಮರು ಭಯಭೀತರಾಗಿದ್ದರು. ‘‘ತಮ್ಮನ್ನು ಬೇರೆ ಕಡೆಗೆ ಕರೆದುಕೊಂಡು ಹೋಗುವಂತೆ ಅವರು ನಮ್ಮನ್ನು ಕೋರಿದರು. ನಮಗೂ ಚಿಂತೆಯಾಗಿತ್ತು. ಅವರ ಪೈಕಿ ಯಾರಿಗಾದರೂ ಹೃದಯಾಘಾತ ಸಂಭವಿಸ ಬಹುದಾಗಿತ್ತು’’ ಎಂದು ಬಲಿಯಾನ್ ಹೇಳಿದರು.
ಒಂದು ದಿನ ಕಳೆಯಿತು. ಮುಂದೆ ಏನಾಗಬಹುದು ಎಂಬ ಮಾಹಿತಿ ಯಾರಿಗೂ ಇರಲಿಲ್ಲ.
ಪರಿಹಾರ ಶಿಬಿರಕ್ಕೆ
ಮರುದಿನ ಬಲಿಯಾನ್ ತನ್ನ ಟ್ರಾಕ್ಟರ್ ಟ್ರಾಲಿಯನ್ನು ಹೊರದೆಗೆದು ಸಮೀಪದ ಪರಿಹಾರ ಶಿಬಿರಕ್ಕೆ ಹೋಗಬಯಸಿದವರನ್ನು ಅಲ್ಲಿಗೆ ಕರೆದುಕೊಂಡು ಹೋದರು. ಪರಿಹಾರ ಶಿಬಿರವನ್ನು ಬಸಿ ಕಲನ್ ಮದ್ರಸದಲ್ಲಿ ಸ್ಥಾಪಿಸಲಾಗಿತ್ತು.
ಮುಂದಿನ ಕೆಲವು ದಿನಗಳಲ್ಲಿ ಬಲಿಯಾನ್ ಮುಸ್ಲಿಮರನ್ನು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಿದರು ಹಾಗೂ ಇನ್ನು ಗ್ರಾಮಕ್ಕೆ ಸುರಕ್ಷಿತವಾಗಿ ಮರಳಬಹುದು ಎಂದು ಅಂತಿಮವಾಗಿ ಅವರಿಗೆ ಮನವರಿಕೆ ಮಾಡಿದರು. ವಾರದಲ್ಲೇ ಅವರು ಮುಸ್ಲಿಮರನ್ನು ತಂಡಗಳಲ್ಲಿ ಗ್ರಾಮಕ್ಕೆ ಕರೆದುಕೊಂಡು ಬಂದರು.
‘‘ಕೆಲವು ಮುಸ್ಲಿಮರು ತಪ್ಪು ಮಾಡಿದರೆ ಅಮಾಯಕರನ್ನು ಯಾಕೆ ದೂಷಿಸುತ್ತೀರಿ. ಅವರು ನಮ್ಮಂತೆಯೇ ಮಾನವರು, ನಮ್ಮಂತೆಯೇ ಅವರು ಇದೇ ಗ್ರಾಮದಲ್ಲಿ ಹುಟ್ಟಿದವರು. ಅವರ ಮೇಲೆ ದಾಳಿ ನಡೆಸುವ ಬಗ್ಗೆ ಯಾರಾದರೂ ಯೋಚಿಸುವುದಾದರೂ ಹೇಗೆ? ನಾವು ಒಟ್ಟಿಗೆ ತಿಂದಿದ್ದೇವೆ, ಒಟ್ಟಿಗೆ ಕಲಿತಿದ್ದೇವೆ, ಒಟ್ಟಿಗೆ ಆಡಿದ್ದೇವೆ. ಅದು ಇಂದಿಗೂ ಹಾಗೆಯೇ ಇದೆ’’ ಎಂದು ಬಲಿಯಾನ್ ಹೇಳುತ್ತಾರೆ.
ಗ್ರಾಮದಲ್ಲಿ ಸೌಹಾರ್ದತೆಯನ್ನು ಕಾಪಾಡುವುದು ಬಲಿಯಾನ್‌ಗೆ ಸಾಹಸದ ಕೆಲಸವಾಗಿತ್ತು. ಕೆಲವು ಕುಟುಂಬಗಳು ಇನ್ನೂ ಗ್ರಾಮಕ್ಕೆ ಹಿಂದಿರುಗಿಲ್ಲ ಎಂಬ ಬಗ್ಗೆ ಅವರಿಗೆ ವಿಷಾದವಿದೆ.
‘‘ನಾನು ಅವರನ್ನು ಭೇಟಿ ಮಾಡಿದಾಗಲೆಲ್ಲ ಇನ್ನೊಂದೆರಡು ದಿನಗಳಲ್ಲಿ ಬರುತ್ತೇವೆ ಎಂದು ಅವರು ಹೇಳುತ್ತಾರೆ. ಆದರೆ, ಮತ್ತೆ ಎಲ್ಲಾದರೂ ಒಂದು ಕಡೆ ಗುಂಡುಹಾರಾಟ ನಡೆಯುತ್ತದೆ ಹಾಗೂ ಮತ್ತೆ ಗಾಬರಿ ಹರಡುತ್ತದೆ.
ಶಾಮ್ಲಿ ಜಿಲ್ಲೆಯಲ್ಲಿ ಇನ್ನೊಂದು ಗ್ರಾಮದ ಕತೆ
ಶಾಮ್ಲಿ ಜಿಲ್ಲೆಯ ಜಾಟ್ ಪ್ರಾಬಲ್ಯದ ಕುಡಾನ ಗ್ರಾಮದಲ್ಲೂ ಗಲಭೆಯ ಸಂದರ್ಭದಲ್ಲಿ ಜಾಟರು ಮುಸ್ಲಿಮರ ರಕ್ಷಣೆಗೆ ಧಾವಿಸಿದ್ದರು. ದಿಲ್ಲಿ ಪೊಲೀಸ್‌ನಲ್ಲಿ ಕಾನ್‌ಸ್ಟೇಬಲ್ ಆಗಿರುವ ಸತೀಂದರ್ ಮಲಿಕ್ ಕಾಲಿಗಾದ ಗಾಯವನ್ನು ವಾಸಿ ಮಾಡಿಕೊಳ್ಳಲು ಊರಿಗೆ ಬಂದಿದ್ದರು. ಅವರು ಜಾಟ್ ಸಮುದಾಯಕ್ಕೆ ಸೇರಿದವರು. ಅವರ ಗ್ರಾಮದಲ್ಲಿರುವ ಮುಸ್ಲಿಮರು ಬಡವರು ಹಾಗೂ ಭೂರಹಿತರು ಹಾಗೂ ಅವರು ಜಾಟ್ ಕುಟುಂಬಗಳ ಕೃಷಿ ಭೂಮಿಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಹಾಗೂ ಆಕಳುಗಳನ್ನು ನೋಡಿಕೊಳ್ಳುತ್ತಿದ್ದರು.
‘‘ಶಾಮ್ಲಿಯಲ್ಲಿ ಗಲಭೆ ಸ್ಫೋಟಗೊಂಡಾಗ ನನ್ನ ಗ್ರಾಮದ ಮುಸ್ಲಿಮರು ಪರಿಹಾರ ಶಿಬಿರಗಳಿಗೆ ಹೋಗುವ ಬಗ್ಗೆ ಮಾತನಾಡುತ್ತಿದ್ದರು. ಅವರನ್ನು ಕರೆದುಕೊಂಡು ಹೋಗಲು 2-3 ಬಸ್ಸುಗಳು ಸಿದ್ಧವಾಗಿದ್ದವು. ನಾವು ಅವರನ್ನು ಭೇಟಿಯಾಗಿ ಊರಿನಿಂದ ಹೋಗದಂತೆ ಮನವಿ ಮಾಡಿದೆವು. ನಮ್ಮ ಊರಿನಲ್ಲಿ ಎಲ್ಲರೂ ಶಾಂತಿಯುತವಾಗಿ ಸಹಬಾಳ್ವೆ ನಡೆಸಬಹುದು ಎಂದು ನಾವು ಅವರಿಗೆ ಹೇಳಿದೆವು’’ ಎಂದು ಸತೀಂದರ್ ಹೇಳಿದರು.
ಅಲ್ಲಿನ ಗ್ರಾಮಸ್ಥರು ತೆಗೆದುಕೊಂಡ ದಿಟ್ಟ ಕ್ರಮದಿಂದಾಗಿ ಊರಿನಲ್ಲಿ ಕೋಮುಸೌಹಾರ್ದತೆ ನೆಲೆಸಿತು. ‘‘ಊರ ಹಿರಿಯರು ನಮ್ಮ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಿದರು. ಪಕ್ಕದ ಗ್ರಾಮಗಳಲ್ಲಿ ಗಲಭೆಗಳಾದವು ಹಾಗೂ ರಕ್ತಪಾತವಾಯಿತು’’ ಎಂದು ಕುಡಾನ ಗ್ರಾಮದ ನಿವಾಸಿ ಮುಹಮ್ಮದ್ ಶಫೀಕ್ ಹೇಳಿದರು.
ಹಾದಿ ತಪ್ಪಿದ ಯುವಕರಿಗೆ ಬುದ್ಧಿ ಮಾತು
ಇದರ ಹೊರತಾಗಿಯೂ ಗ್ರಾಮದಲ್ಲಿ ಗಲಭೆ ಎಬ್ಬಿಸುವ ಹುನ್ನಾರವನ್ನು ಕೆಲವು ಯುವಕರು ಮಾಡುತ್ತಿದ್ದರು.
‘‘ಯುವಕರ ಒಂದು ಗುಂಪು ಗ್ರಾಮದಲ್ಲಿ ಒಟ್ಟು ಸೇರಿ ಗಲಭೆ ನಡೆಸುವ ಯೋಜನೆ ಹಾಕಿತ್ತು. ನೀವು ಹೀಗೆ ಮಾಡಿದರೆ ಎಲ್ಲರೂ ನಷ್ಟ ಅನುಭವಿಸುತ್ತಾರೆ. ನಿಮ್ಮ ಕೆಲಸ ಹಾಗೂ ನಿಮ್ಮ ವ್ಯಾಪಾರಕ್ಕೂ ದಕ್ಕೆಯಾಗುತ್ತದೆ ಎಂದು ನಾವು ಅವರಿಗೆ ಹೇಳಿದೆವು. ಅವರು ನಮ್ಮ ಮಾತನ್ನು ಮನ್ನಿಸಿದರು’’ ಎಂದು ಗ್ರಾಮದ ಪ್ರಧಾನ ರಾಜಿಂದರ್ ಮಲಿಕ್ ಹೇಳಿದರು.

ಸುಧಾರಣೆ ಬಯಸಿದರೆ ದಯವಿಟ್ಟು ನನಗೆ ಮೈಲ್ ಮಾಡಿ

By admin On November - 14 - 2012 ADD COMMENTS

ಪ್ರೀತಿಯ ವಾಚಕರೇ
ಕುಂದಾಪುರ ತಾಲೂಕಿನ ಹಲವಾರು ಜನರು ಇಂದು ಜೀವನೋಪಾಯಕ್ಕಾಗಿ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ತಮ್ಮ ಊರಿನಲ್ಲಿ ಆದ ಚಿಕ್ಕ ಪುಟ್ಟ ಘಟನೆಗಳು ಅಥವಾ ಸಭೆ ಸಮ್ಮಾರಂಭಗಳು ಅಥವಾ ಯಾವುದೇ ಕಾರ್ಯಕ್ರಮಗಳ ವಿಷಯ ಅವರಿಗೆ ಸಿಗುವುದು ತುಂಬಾ ವಿರಳ. ಇದನ್ನು ಮನ ಗಂಡು ಆದಷ್ಟು ನಿಮ್ಮೂರಿನ ವಿಷಯವನ್ನು ಅಂತರ್ಜಾಲದ ಮೂಲಕ ನಿಮ್ಮ
ಸೇವೆ ಮಾದಬೇಂದು ಈ ಮೂಲಕವಾಗಿ ನಾನು ಪ್ರಯತ್ನ ಮಾಡುತ್ತಿದ್ದೇನೆ. ಆದ್ದರಿಂದ ನೀವೆಲ್ಲರೂ ನನ್ನ ಈ ಕರಾವಳಿನುಡಿ ದಿನಪತ್ರಿಕೆ ಯನ್ನು ಓದಿ ಅದನ್ನು ಸಫಲ ಮಾಡಬೇಕಾಗಿ ಕೇಳಿಕೊಳ್ಳುತ್ತೆನೆ.
ಈ ದಿನಪತ್ರಿಕೆಯಲ್ಲಿ ಯಾವುದಾದರೂ ಬದಲಾವಣೆ ಅಥವಾ ಸುಧಾರಣೆ ಬಯಸಿದರೆ ದಯವಿಟ್ಟು ನನಗೆ ಮೈಲ್ ಮಾಡಿ.

ಇತಿ ತಮ್ಮ

ಮೊ ಈ ಸ

Copyright © 2012 All rights reserved.