17 December , 2017 Sunday

COASTAL NEWS

COASTAL NEWS

Archive for September, 2015

ಅಸ್ವಾಭಾವಿಕ ಮರಣ ಪ್ರಕರಣ

By udupi police On September - 4 - 2015 ADD COMMENTS
  • ಉಡುಪಿ: ದಿನಾಂಕ: 02/09/2015 ರಂದು ಬ್ರಂದಾವನ ಕಾಂಪ್ಲೆಕ್ಸ್‌ ನಲ್ಲಿರುವ ಫಿರ್ಯಾದಿ ಎ ಎಸ್‌ಉಮ್ಮರ್‌‌ ಇವರ ಬಾಬ್ತು Deco Pay ಅಂಗಡಿಯನ್ನು  ಸಂಜೆ 19:00ಗಂಟೆಗೆ ಅಂಗಡಿ ಬಾಗಿಲು ಹಾಕಿ ಹೋಗಿದ್ದು  ದಿನಾಂಕ: 03/09/2015ರಂದು ಬೆಳಿಗ್ಗೆ 9:00ಗಂಟೆಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಬಾಗಿಲ ಬಳಿ ಓರ್ವ  ಸುಮಾರು 35 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಮಲಗಿರುವುದು ಕಂಡು ಬಂದು ಅದರ ಬಳಿ ಹೋಗಿ ನೋಡಲಾಗಿ ಆತನು ಮೃತ ಪಟ್ಟಿದ್ದು ಮೃತನು ಯಾವುದೋ ಖಾಯಿಲೆಯಿಂದ ಅಥವಾ ಇನ್ನಾವುದೋ ಕಾರಣದಿಂದ ಮಲಗಿದಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಕ್ರಮಾಂಕ 48/2015 ಕಲಂ:174 ಸಿ.ಆರ್‌.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಪ್ಪಿನ ಕುದ್ರು: ಬೈಕ ಅಪಘಾತ

By udupi police On September - 4 - 2015 ADD COMMENTS
  • ಕುಂದಾಪುರ: ದಿನಾಂಕ 02/09/2015 ರಂದು ರಾತ್ರಿ 8:15 ಗಂಟೆಗೆ ಕುಂದಾಪುರ ತಾಲೂಕು ಉಪ್ಪಿನ ಕುದ್ರು ಗ್ರಾಮದ ಹಾದಿಬೆಟ್ಟು ಕ್ರಾಸ್‌ ಎಂಬಲ್ಲಿ ಆಪಾದಿತ ರಾಧಕೃಷ್ಣ ಎಂಬುವವರು KA 20 W 4188 ನೇ ಬೈಕನ್ನು ಉಪ್ಪಿನಕುದ್ರು ಕಡೆಯಿಂದ ತಲ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರಾದ ಮಂಜುನಾಥ (29), ತಂದೆ : ಕುಷ್ಟ, ವಾಸ: ಮೊಳಸಾಲ್‌‌ ಬೆಟ್ಟು ಉಪ್ಪಿನಕುದ್ರು ಗ್ರಾಮ ಕುಂದಾಪುರ ತಾಲೂಕು ಇವರು ಸಹ ಸವಾರರಾಗಿ, ನಿತ್ತೇಶ ಎಂಬುವವರು ಸವಾರರಾಗಿ ತಲ್ಲೂರಿ ಕಡೆಯಿಂದ ಉಪ್ಪಿನಕುದ್ರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA 20 S 3902 ನೇ ಬೈಕಿಗೆ ಎದುರಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ರವರು ಹಾಗೂ ಬೈಕ್‌ ಸವಾರ ನಿತ್ತೇಶ ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು ನಿತ್ತೇಶನ ತಲೆಯು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ತಾಗಿ ಅವರ ತಲೆಗೆ ಬಲ ಕಿವಿಗೆ ಹಾಗೂ ಮೈಕೈಗೆ ರಕ್ತಗಾಯ  ಹಾಗೂ ಒಳ ನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ  ಕೆಎಂಸಿ ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2015 ಕಲಂ: 279 ,337   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12, ಉಡುಪಿ ಜಿಲ್ಲೆಯಲ್ಲಿ 10 ಶಿಕ್ಷಕರ ಆಯ್ಕೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

By prajavani On September - 4 - 2015 ADD COMMENTS

ಉಡುಪಿ: ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ತಲಾ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರ ವಿವರ ಕೆಳಕಂಡಂತಿದೆ.

ಪ್ರೌಢಶಾಲಾ ವಿಭಾಗ:  ಕಿರಣ್‌ ಹೆಗ್ಡೆ– ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಕಾವಡಿ, ಬ್ರಹ್ಮಾವರ ವಲಯ. ಪ್ರಭಾಕರ ಮಿತ್ಯಂತ– ಉಪ ಪ್ರಾಂಶುಪಾಲ, ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ, ಕುಂದಾ ಪುರ ವಲಯ. ಡಾ. ಕೆ. ಕಿಶೋರ್‌ ಕುಮಾರ್‌ ಶೆಟ್ಟಿ– ಸಹ ಶಿಕ್ಷಕ ಸರ್ಕಾರಿ ಪ್ರೌಢಶಾಲೆ ಹಕ್ಲಾಡಿ, ಬೈಂದೂರು ವಲಯ. ಬಿ. ಗುಣಕರ ಶೆಟ್ಟಿ, ಯು. ಕಮಲಾ ಬಾಯಿ ಪ್ರೌಢಶಾಲೆ, ಕಡಿಯಾಳಿ ಉಡುಪಿ ವಲಯ. ಪ್ರಕಾಶ್‌ ನಾಯ್ಕ– ಸಹ ಶಿಕ್ಷಕ ಸರ್ಕಾರಿ ಪದವಿ ಪೂರ್ವ ಕಾಲೇಜು, ಬೈಲೂರು. ಕಾರ್ಕಳ ವಲಯ.

ಪ್ರಾಥಮಿಕ ಶಾಲಾ ವಿಭಾಗ: ರವೀಂದ್ರ ಹೆಗ್ಡೆ– ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಟ್ಟೆ, ಕಾರ್ಕಳ ವಲಯ. ರತಿ ವೈ– ಸಹ ಶಿಕ್ಷಕಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ, ಉಡುಪಿ ವಲಯ. ವೇದಾ ವತಿ– ಸಹ ಶಿಕ್ಷಕಿ, ಧರ್ಮಸ್ಥಳ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮಯ್ಯಾಡಿ, ಬೈಂದೂರು ವಲಯ. ಅಶೋಕ್‌ ತೆಕ್ಕಟ್ಟೆ– ಸಹ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕತ್ತೂರು, ಕುಂದಾಪುರ ವಲಯ, ಎಚ್‌. ಸಖಾರಾಮ್‌– ಬಿ.ವಿ. ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೀಳಂಜೆ ಬ್ರಹ್ಮಾವರ ವಲಯ.

12 ಶಿಕ್ಷಕರಿಗೆ ಪ್ರಶಸ್ತಿ
ಮಂಗಳೂರು:
 ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪ್ರೌಢ ಶಾಲಾ ವಿಭಾಗ ದಲ್ಲಿ ಐವರು ಶಿಕ್ಷಕರನ್ನು ಮತ್ತು ಪ್ರಾಥ ಮಿಕ ಶಾಲಾ ವಿಭಾಗದಲ್ಲಿ 7 ಶಿಕ್ಷಕರನ್ನು ಜಿಲ್ಲಾ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರೌಢ ಶಾಲಾ ವಿಭಾಗ:  ಮಂಗಳೂರು ಫಳ್ನೀರ್‌ನ ಸೇಂಟ್ ಮೇರೀಸ್ ಅನುದಾನಿತ ಪ್ರೌಢ ಶಾಲೆಯ ಸೇವಂತಿ, ಉರ್ವ ಪೊಂಪೈ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಕೆ. ಸಾವಿತ್ರಿ, ಮೂಡುಬಿದಿರೆ ಜೈನ ಪ್ರೌಢಶಾಲೆಯ ಆರ್‌. ರಾಜ ಕುಮಾರ್‌, ಬಂಟ್ವಾಳ ತಾಲ್ಲೂಕು ಮೊಂಟೆ ಪದವು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕ ಟಿ.ಎನ್‌ ಸಂತೋಷ್ ಕುಮಾರ್, ಪುತ್ತೂರು ನೆಲ್ಯಾಡಿಯ ಸಂತ ಜಾರ್ಜ್‌ ಪ್ರೌಢಶಾಲೆಯ ಪಿ.ಎಂ. ಉಲಹನ್ನನ್‌ ಉತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗ:  ಕುಳಾಯಿ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಕೆ. ಪೇಜಾವರ, ಬಬ್ಬುಕಟ್ಟೆ ಪೆರ್ಮನ್ನೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಟಿ. ಸೀತಾಲಕ್ಷ್ಮಿ, ವಾಲ್ಪಾಡಿ ಆನೆಗುಡ್ಡೆ ಅನು ದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನೋಬರ್ಟ್ ಪಿರೇರಾ, ಬಂಟ್ವಾಳ ತಾಲ್ಲೂಕು ಹೂಹಾಕುವ ಕಲ್ಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ. ಶಾರದಾ, ಬೆಳ್ತಂಗಡಿ ತಾಲ್ಲೂಕು ಸಾವ್ಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಅಬೂಬಕ್ಕರ್‌, ಪುತ್ತೂರು ಪುತ್ತಿಗೆ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕೆ. ಹನುಮಂತಪ್ಪ, ಸುಳ್ಯ ತಾಲ್ಲೂಕು ಮಂಡೆಕೋಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಡಿ. ಪದ್ಮಾ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಸಮಿತಿಯು ಸಭೆ ನಡೆಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸೆ. 5ರಂದು ತೆಂಕಿಲ ಪುತ್ತೂರು ಒಕ್ಕಲಿಗ ಗೌಡ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಡಿಡಿಪಿಐ ವಾಲ್ಟರ್ ಡಿಮೆಲ್ಲೋ ತಿಳಿಸಿದ್ದಾರೆ.

ಪ್ರತಿ ನೋಟಿನಲ್ಲಿ 40-45 ಸುರಕ್ಷತಾ ಲಕ್ಷಣಗಳು: ಬಾಲಚಂದ್ರನ್

By varthabharathi On September - 4 - 2015 ADD COMMENTS

ಉಡುಪಿ, ಸೆ.3: ಈಗಿನ ನೋಟುಗಳಲ್ಲಿ ಸುಮಾರು 40ರಿಂದ 45ರವರೆಗೆ ಸುರಕ್ಷತಾ ಲಕ್ಷಣಗಳನ್ನು ಸೇರಿಸಲಾಗಿದೆ. ಇದು ಜನಸಾಮಾನ್ಯರಿಗೆ ಅಷ್ಟು ಸುಲಭದಲ್ಲಿ ಅರ್ಥ ಆಗುವುದಿಲ್ಲ. ಇದೇ ಕಾರಣದಿಂದ ಖೋಟಾನೋಟುಗಳು ಹೆಚ್ಚು ಹೆಚ್ಚು ಕಂಡು ಬರುತ್ತವೆ. ಸುರಕ್ಷತೆಯ ದೃಷ್ಟಿಯಿಂದ ಈ ಎಲ್ಲ ಲಕ್ಷಣಗಳನ್ನು ರಿಸರ್ವ್ ಬ್ಯಾಂಕ್ ಸಾರ್ವ ಜನಿಕವಾಗಿ ಬಹಿರಂಗ ಪಡಿಸಿಲ್ಲ ಎಂದು ಕಾರ್ಪೊರೇಷನ್ ಬ್ಯಾಂಕಿನ ಹಿರಿಯ ಪ್ರಬಂಧಕ ಆರ್.ಕೆ.ಬಾಲಚಂದ್ರನ್ ಹೇಳಿದ್ದಾರೆ.
ಉಡುಪಿ ಬಳಕೆದಾರರ ವೇದಿಕೆ ಹಾಗೂ ಕಾರ್ಪೊರೇಷನ್ ಬ್ಯಾಂಕಿನ ಜಂಟಿ ಆಶ್ರಯದಲ್ಲಿ ಗುರುವಾರ ಬ್ಯಾಂಕಿನ ಸ್ಥಾಪಕ ಕಚೇರಿಯ ಹಾಜಿ ಅಬ್ದುಲ್ಲ ಸ್ಮಾರಕ ಸಭಾಗೃಹದಲ್ಲಿ ಆಯೋಜಿಸಲಾದ ಖೋಟಾ ನೋಟುಗಳ ಪತ್ತೆ, ಎಟಿಎಂ ಸಮಸ್ಯೆ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ ನಂತರ ದೇಶದಲ್ಲಿ ಎ.ಪಿ. ಸರಣಿಯ ನೋಟುಗಳನ್ನು ಮುದ್ರಿಸಲಾಯಿತು. ನಂತರ ಆ ನೋಟುಗಳನ್ನು ವಾಪಸು ಪಡೆದ ರಿಸರ್ವ್ ಬ್ಯಾಂಕ್ ಎಂ.ಜಿ. (ಮಹಾತ್ಮ ಗಾಂಧಿ) ಸರಣಿಯ ನೋಟುಗಳನ್ನು ಮುದ್ರಿಸಿತು. ಈ ನೋಟುಗಳು 1996ರಿಂದ 2005ರವರೆಗೆ ಚಲಾವಣೆಯಲ್ಲಿತ್ತು. ಈ ನೋಟುಗಳಲ್ಲಿ ಐದು ರೂ.ನಿಂದ 1,000ರೂ. ಮುಖಬೆಲೆಯ ನೋಟುಗಳ ವೌಲ್ಯ ಬೇರೆಬೇರೆಯಾಗಿದ್ದರೂ ಅವುಗಳು ಮುದ್ರಿಸಲು ತಗಲುವ ವೆಚ್ಚ ಒಂದೇ. ಈ ನೋಟುಗಳಿಗೆ ಸುಮಾರು 47ಪೈಸೆ ವೆಚ್ಚ ತಗಲುತ್ತಿತ್ತು. ಅದಕ್ಕಾಗಿ ನಂತರ ನಾಣ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು ಎಂದು ಅವರು ಮಾಹಿತಿ ನೀಡಿದರು.
ನಮ್ಮ ನೋಟಿನಲ್ಲಿ ಬಹಳಷ್ಟು ವಿಶೇಷತೆಗಳಿವೆ. ನಿಮಗೆ ನೋಟು ಬೇಡದಿದ್ದರೆ ಅದನ್ನು ಸರಕಾರಕ್ಕೆ ನೀಡಿದರೆ ಅಷ್ಟೇ ವೌಲ್ಯದ ಸೊತ್ತನ್ನು ನೀಡಲಾಗುತ್ತದೆ. ಇದಕ್ಕೆ ಗ್ಯಾರಂಟಿ ಕ್ಲೊಸ್ ಎನ್ನಲಾಗುತ್ತದೆ. ಅದೇ ರೀತಿ ಇದರಲ್ಲಿರುವ ಎಸಿಎಫ್ ಎಂಬ ಲಕ್ಷಣದಿಂದ ಝೆರಾಕ್ಸ್ ಮಾಡಿದರೂ ಕೆಲವು ಭಾಗ ಖಾಲಿಯಾಗಿ ಬರುತ್ತವೆೆ. ನೋಟಿನಲ್ಲಿ ಮುದ್ರಿಸಿರುವ ಸಂಖ್ಯೆಯ ಫಾಂಟ್ ಮಾರುಕಟ್ಟೆಯಲ್ಲಿ ಎಲ್ಲೂ ಸಿಗಲ್ಲ. ಬಟ್ಟೆ ಮಿಶ್ರಿತ ಕಾಗದದಿಂದ ನೋಟನ್ನು ತಯಾರಿಸಲಾಗುತ್ತದೆ. ಗಾಂಧಿ ಮಹಾತ್ಮ ಎಂಬ ಕಾರಣಕ್ಕೆ ನೋಟಿನಲ್ಲಿ ಮುದ್ರಿಸಿರುವುದಲ್ಲ, ಅವರ ಮುಖ ಭಾವ, ಕನ್ನಡಿ, ಬೋಳು ತಲೆ ಚಿತ್ರವನ್ನು ಗೆರೆಯ ಮೂಲಕ ಸುಲಭ ವಾಗಿ ಮಾಡಲು ಅಸಾಧ್ಯ ಎಂಬ ಕಾರಣಕ್ಕೆ ಮುದ್ರಿಸುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ವಲಯ ಮುಖ್ಯ ಪ್ರಬಂಧಕ ವಿ.ರಾಜೇಂದ್ರ ಪ್ರಸಾದ್, ಮುಖ್ಯ ಪ್ರಬಂಧಕ ಶಿವರಾಮ ಕೃಷ್ಣ ಉಪಸ್ಥಿತರಿದ್ದರು. ವೇದಿಕೆಯ ಸಂಚಾಲಕ ದಾಮೋದರ್ ಐತಾಳ್ ಸ್ವಾಗತಿಸಿದರು. ವಿಶ್ವಸ್ಥ ಎ.ಪಿ.ಕೊಡಂಚ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತರಾಜ ಐತಾಳ್ ವಂದಿಸಿದರು. ಟಿ. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಒಂದು ರೂ. ನೋಟಿಗೆ 1.14ರೂ. ವೆಚ್ಚ
ಒಂದು ರೂಪಾಯಿ ಮುಖಬೆಲೆಯ ಒಂದು ನೋಟು ಮುದ್ರಿಸಲು 1.14ರೂ. ವೆಚ್ಚ ತಗಲುತ್ತದೆ. ಆ ಖರ್ಚನ್ನು ಇಳಿಸಲು ಕೇಂದ್ರ ಸರಕಾರ ನೋಟುಗಳ ಬದಲಾಗಿ ನಾಣ್ಯಗಳನ್ನು ಚಲಾವಣೆಗೆ ತರುತ್ತಿದೆ. ಇದೀಗ ಸರಕಾರ ಮತ್ತೆ ಒಂದು ರೂಪಾಯಿ ನೋಟುಗಳನ್ನು ಮುದ್ರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಆರ್.ಕೆ.ಬಾಲಚಂದ್ರನ್ ತಿಳಿಸಿದರು.
ಎಲ್ಲ ನೋಟುಗಳನ್ನು ಮುದ್ರಿಸುವ ಅಧಿಕಾರ ರಿಸರ್ವ್ ಬ್ಯಾಂಕ್‌ಗೆ ಇದ್ದರೆ ಒಂದು ರೂಪಾಯಿ ಕರೆನ್ಸಿ ಮುದ್ರಿಸುವ ಅಧಿಕಾರ ಮಾತ್ರ ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ಒಂದು ವೇಳೆ ರಿಸರ್ವ್ ಬ್ಯಾಂಕ್‌ನವರು ಮುಷ್ಕರ ಹೂಡುವ ಪ್ರಸಂಗ ಎದುರಾದರೆ ಆಗ ದೇಶದಲ್ಲಿ ಹಣದ ಕೊರತೆ ಉಂಟಾಗ ಬಹುದು ಎಂಬ ಹಿನ್ನೆಲೆಯಲ್ಲಿ ಈ ಒಂದು ಕರೆನ್ಸಿಯನ್ನು ಮುದ್ರಿಸುವ ಅಧಿಕಾರವನ್ನು ಸಂವಿಧಾನ ಕೇಂದ್ರ ಸರಕಾರಕ್ಕೆ ನೀಡಿದೆ. ಇದಕ್ಕೆ ಸರಕಾರದ ಮುಖ್ಯಕಾರ್ಯ ದರ್ಶಿ ಸಹಿ ಹಾಕುತ್ತಾರೆ ಎಂದರು.

ಮರಳು ಅಕ್ರಮ ಸಾಗಾಟ ತಡೆಗೆ ಗ್ರಾಪಂಗಳಲ್ಲಿ ಸಿಸಿಟಿವಿ: ಉಡುಪಿ ಜಿಪಂ ಸಾಮಾನ್ಯ ಸಭೆ ನಿರ್ಣಯ

By varthabharathi On September - 4 - 2015 ADD COMMENTS

 

ಉಡುಪಿ, ಸೆ.3: ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆ ಹಾಗೂ ಮರಳಿನ ಅಕ್ರಮ ಸಾಗಾಟದ ಕುರಿತು ಇಂದು ನಡೆದ ಉಡುಪಿ ಜಿಪಂನ 23ನೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿರುವ ಮರಳಿನ ಕೃತಕ ಅಭಾವವನ್ನು ಬಗೆಹರಿಸದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಧರಣಿ ನಡೆಸುವ ಎಚ್ಚರಿಕೆಯನ್ನೂ ನೀಡಿದರು.
ಜಿಪಂ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕುಂದಾಪುರ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ, ಆ.1ರಿಂದ ಮರಳು ತೆಗೆಯಲು ಇದ್ದ ನಿಷೇಧ ತೆರವಾಗಿದ್ದರೂ, ಕೇವಲ ಸಿಆರ್‌ಝೆಡ್ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾತ್ರ ಮರಳು ತೆಗೆಯಲು ಅವಕಾಶ ನೀಡಲಾಗುತ್ತಿದೆ. ನಾನ್‌ಸಿಆರ್‌ಝೆಡ್ ಪ್ರದೇಶದಲ್ಲಿ ಇನ್ನೂ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದರು.
ಕುಂದಾಪುರದಲ್ಲಿ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಏಳು ಸ್ಯಾಂಡ್‌ಬಾರ್‌ಗಳಲ್ಲಿ 36 ಮಂದಿಗೆ ಮರಳುಗಾರಿಕೆಗೆ ಪರವಾನಿಗೆ ನೀಡಿದ್ದರೂ ಅಲ್ಲಿ 100ಕ್ಕೂ ಅಧಿಕ ಮಂದಿ ಮರಳುಗಾರಿಕೆ ಮಾಡುತ್ತಿದ್ದಾರೆ. ಒಂದು ದಿನದಲ್ಲಿ 2-3 ಲೋಡು ಮರಳು ಸಾಗಾಟ ಮಾಡಬಹುದು. ಆದರೆ ಕುಂದಾಪುರ ತಾಲೂಕಿನಲ್ಲಿ 100-200 ಲೋಡ್‌ಗಳು ಅಕ್ರಮವಾಗಿ ಸಾಗುತ್ತಿವೆ. ಒಂದೊಂದು ದಕ್ಕೆಗಳಲ್ಲಿ 30ಕ್ಕೂ ಅಧಿಕ ಮರಳು ಲಾರಿಗಳು ಸಾಗುತ್ತಿವೆ. ಇದರಿಂದ ಅಲ್ಲಿ ಆಗುವ ಅನಾಹುತಗಳು ಹೇಳಲು ಸಾಧ್ಯವಿಲ್ಲ ಎಂದರು.
ಇವೆಲ್ಲವೂ ಅಧಿಕಾರಿಗಳಿಗೆ ತಿಳಿದೇ ನಡೆಯುತ್ತಿದೆ. ಇವರು ಕಣ್ಮುಚ್ಚಿ ಕುಳಿತಿದ್ದಾರೆ. ಮರಳುಗಾರಿಕೆ ಅಷ್ಟೊಂದು ದೋಣಿಗಳ ಸತತ ಸಾಗಾಟದಿಂದ ಹೊಳೆಯ ಒಳಗಿನಿಂದ ಹಾಕಿದ ಕುಡಿಯುವ ನೀರಿನ ಪೈಪ್ ಒಡೆದಿದ್ದು, ಗ್ರಾಮಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ನಾವು ತಾಪಂ ಮೂಲಕ ಎಷ್ಟೇ ಬೊಬ್ಬೆ ಹೊಡೆದರೂ ಯಾರೂ ಗಮನವನ್ನೇ ನೀಡುತ್ತಿಲ್ಲ. ಇದರೊಂದಿಗೆ ಕಾಂಡ್ಲಾ ವನಗಳಿಗೆ, ಸೇತುವೆಗಳಿಗೆ ಆಪತ್ತು ಎದುರಾಗಿದೆ ಎಂದು ಭಾಸ್ಕರ ಬಿಲ್ಲವ ಆಕ್ರೋಶಭರಿತರಾಗಿ ನುಡಿದರು.
ಗ್ರಾಪಂನ ಒಪ್ಪಿಗೆ ಇಲ್ಲದೇ, ಬೈಕಾಡಿಯ ಸರಕಾರಿ ಜಾಗದಲ್ಲಿ ಮರಳನ್ನು ಸಂಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ದುಡ್ಡುಪಡೆದು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಬೆಳಗಿನಜಾವ 4 ಗಂಟೆಗೆಲ್ಲಾ ಮರಳುಗಾರಿಕೆ ದಂಧೆ ಆರಂಭಗೊಳ್ಳುತ್ತಿದೆ. ಗ್ರಾಮದ ಜನರಿಗೆ ನೆಮ್ಮದಿ ಇಲ್ಲವಾಗಿದೆ ಎಂದು ಮಲ್ಲಿಕಾ ದೂರಿದರು.
ಜಿಲ್ಲೆಯ ಜನರಿಗೆ ಮನೆ ಕಟ್ಟಲು ಈಗ ಸಿಮೆಂಟ್, ಕಬ್ಬಿಣ, ಕಲ್ಲು ಎಲ್ಲಾ ಸಿಗುತ್ತಿದೆ. ಆದರೆ ಮರಳೇ ಸಿಗುತ್ತಿಲ್ಲ್ಲ. ನಮ್ಮ ಕಣ್ಣೆದುರೇ ಅವು ಹೊರ ಜಿಲ್ಲೆಗಳಿಗೆ ಸಾಗುತ್ತಿವೆ. ನಾವಿಲ್ಲಿ ಮರಳಿಗಾಗಿ ಪರದಾಡಬೇಕು ಎಂದು ಕಟಪಾಡಿ ಶಂಕರ ಪೂಜಾರಿ, ಅನಂತ ಮೊವಾಡಿ, ಬಾಬು ಶೆಟ್ಟಿ, ಗಣಪತಿ ಶ್ರೀಯಾನ್, ಇಲಾಖೆಯ ಅಧಿಕಾರಿಗಳ ವಿರುದ್ಧ ಕೆಂಡ ಕಾರಿದರು.
ಪ್ರತಿ ಗ್ರಾಪಂ ಮಟ್ಟದಲ್ಲಿ ಮರಳುಗಾರಿಕೆ ಮೇಲೆ ಕಣ್ಣಿಡಲು ಸಿಸಿಟಿವಿಗಳನ್ನು ಅಳವಡಿಸುವಂತೆ ನಿರ್ಣಯಕೈಗೊಳ್ಳುವಂತೆ ಭಾಸ್ಕರ ಬಿಲ್ಲವ ಸಲಹೆ ನೀಡಿದರು. ಇದಕ್ಕೆ ಸದಸ್ಯರ ಸಹಮತ ವ್ಯಕ್ತವಾಯಿತು. ಸಿಸಿಟಿವಿ ಅಳವಡಿಕೆಯಿಂದ ನಡೆಯುವ ಅಕ್ರಮ ದಂಧೆ ನಿಲ್ಲಬಹುದು ಎಂದರು. ಆದರೆ ಜಿಪಂ ಕಾರ್ಯನಿರ್ವಹಣಾಧಿಕಾರಿ ಎಂ.ಕನಗವಲ್ಲಿ ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಕೇವಲ ಸಲಹೆಯನ್ನಷ್ಟೇ ನೀಡಬಹುದು ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಿರಿಯ ಭೂವಿಜ್ಞಾನಿಯಾಗಿ ಕಳೆದ ವಾರವಷ್ಟೇ ಕೋಲಾರದಿಂದ ವರ್ಗವಾಗಿ ಬಂದ ಕೋದಂಡರಾಮಯ್ಯ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಯನ್ನು ಘೋಷಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದನ್ನು ಎದುರು ನೋಡಲಾಗುತ್ತಿದೆ. ಈ ತಿಂಗಳು ಸರಕಾರ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ಹೊರಬೀಳಬೇಕಾಗಿದೆ. ಈಗ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮಾತ್ರ ಮರಳುಗಾರಿಕೆಗೆ ಪರವಾನಿಗೆ ನೀಡಲಾಗಿದೆ ಎಂದರು.
ಕೊನೆಗೆ ಮರಳುಗಾರಿಕೆ ನಡೆಯುವ ವ್ಯಾಪ್ತಿಯ ಗ್ರಾಪಂಗಳು ಮರಳುಗಾರಿಕೆಗೆ ಪರವಾನಿಗೆ ನೀಡಲು ಅನುಮತಿ ನೀಡುವಂತೆ ಹಾಗೂ ಸಾಧ್ಯವಿದ್ದಲ್ಲಿ ಸಿಸಿಟಿವಿ ಅಳವಡಿಸುವಂತೆ ಕೋರುವ ನಿರ್ಣಯವನ್ನು ಮಾಡಲಾಯಿತು.
ಮರಳು ನೀತಿಯಲ್ಲ ‘ಮರುಳು’ ನೀತಿ!
ತಡವಾಗಿ ಸಭೆಗೆ ಬಂದ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಅವರು ಮರಳು ನೀತಿಯ ಕುರಿತು ಸಭೆಗೆ ವಿವರಗಳನ್ನು ನೀಡಿ, ಜಿಲ್ಲಾ ಮರಳು ಉಸ್ತುವಾರಿ ಸಮಿ ತಿಯ ಸಭೆಯಲ್ಲಿ ಆದ ನಿರ್ಧಾರದಂತೆ ಜಿಲ್ಲಾಧಿಕಾರಿಗಳು ಆ.1ರಿಂದ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದ್ದಾರೆ. ಇದನ್ನು ಸಾಂಪ್ರದಾಯಿಕ ಮರಳುಗಾರಿಕೆ ಮಾಡುವವರಿಗೆ ನೀಡಲಾಗಿದೆ. ಇನ್ನು ನಾನ್ ಸಿಆರ್‌ಝೆಡ್ ಪ್ರದೇಶಗಳಲ್ಲಿ ಟೆಂಡರ್ ಮೂಲಕ ಮರಳು ಗಾರಿಕೆ ಜವಾಬ್ದಾರಿಯನ್ನು ಪಿಡಬ್ಲುಡಿ ಇಲಾಖೆಗೆ ನೀಡಲಾಗಿದೆ ಎಂದರು.
ಆದರೆ ಒಂದೇ ಜಿಲ್ಲೆಯಲ್ಲಿ ಮರಳಿಗೆ ಎರಡು ದರ ನಿಗದಿ ಸರಿಯಲ್ಲ. ಇದರಿಂದ ಜನರಿಗೆ ತೊಂದರೆ ಎಂದು ಭಾವಿಸಿ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಿಆರ್‌ಝೆಡ್ ಮತ್ತು ನಾನ್‌ಸಿಆರ್‌ಝೆಡ್ ಪ್ರದೇಶಗಳಲ್ಲಿ ಒಂದೇ ರೀತಿಯ ಮರಳು ನೀತಿಯನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಜು.31ರಂದು ಪ್ರಸ್ತಾವನೆ ಹೋಗಿದೆ. ಅದಕ್ಕೆ ಅನುಮತಿ ಬಂದಾಕ್ಷಣ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇಲ್ಲಿ ಮರಳುಗಾರಿಕೆ ಮಾಡುವವರೆಲ್ಲರೂ, ಶೇ.50ನ್ನು ಸ್ಥಳೀಯ ಬಳಕೆಗೆ ನೀಡಬೇಕು. ಉಳಿದ ಶೇ.50ನ್ನು ಹೊರ ಜಿಲ್ಲೆಗೆ ಕೊಡಲು ಅನುಮತಿ ಇದೆ ಎಂದು ಚಂದ್ರಶೇಖರ್ ಹೇಳಿದಾಗ, ಸದಸ್ಯರು ಇದನ್ನು ತೀವ್ರವಾಗಿ ವಿರೋಧಿಸಿದರು. ಜಿಲ್ಲೆಯ ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿರುವಾಗ ಹೆಚ್ಚು ದುಡ್ಡಿನ ಆಸೆಗಾಗಿ ಮರಳನ್ನು ಹೊರ ಜಿಲ್ಲೆಗೆ ಸಾಗಿಸುವುದು ಸರಿಯಲ್ಲ. ಇದು ಮರಳು ನೀತಿಯಲ್ಲ, ‘ಮರುಳು’ ನೀತಿ ಎಂದು ಅನಂತ ಮೊವಾಡಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವಿರುದ್ಧ ಶ್ರೀಯಾನ್ ಕಿಡಿ
ಮರಳು ಸಮಿತಿ ಜಿಲ್ಲೆಯ ಹಿತಾಸಕ್ತಿಯನ್ನು ಮರೆತಿದೆ. ಜಿಲ್ಲಾಧಿಕಾರಿಗೆ ಮಾಹಿತಿಯ ಕೊರತೆ ಇದೆ ಎಂದು ಅನಂತ ಮೊವಾಡಿ ದೂರಿದರೆ, ಜಿಲ್ಲಾಧಿಕಾರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗಣಪತಿ ಶ್ರೀಯಾನ್, ಅವರಿಂದ ಜಿಲ್ಲೆಗೆ ಬಹಳ ಅನ್ಯಾಯವಾಗುತ್ತಿದೆ. ಅವರ ಎದುರು ಯಾರೂ ಮಾತನಾಡುತ್ತಿಲ್ಲ. ಅವರು ಯಾರ ಸಲಹೆಯನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದರು.

ಕಪ್ಪು ಹಣ: ಸೆ.7ರೊಳಗೆ ವರದಿ ಸಲ್ಲಿಸಿ: ‘ಸಿಟ್’ಗೆ ಸುಪ್ರೀಂ ಕೋರ್ಟ್ ಸೂಚನೆ

By varthabharathi On September - 4 - 2015 ADD COMMENTS

ಹೊಸದಿಲ್ಲಿ, ಸೆ.3: ಕಪ್ಪು ಹಣದ ತನಿಖೆಯ ಕುರಿತಂತೆ ಇದೇ ಸೆಪ್ಟಂಬರ್ ಏಳರೊಳಗೆ ನಾಲ್ಕನೆ ಪ್ರಗತಿ ವರದಿಯನ್ನು ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ (ಸಿಟ್) ಸುಪ್ರೀಂ ಕೋರ್ಟ್ ಗುರುವಾರ ಸೂಚನೆ ನೀಡಿದೆ.
ಅಲ್ಲದೆ, ವಿದೇಶಿ ಬ್ಯಾಂಕ್‌ಗಳಲ್ಲಿ ಇರಿಸಿರುವ ಕಪ್ಪು ಹಣವನ್ನು ವಾಪಸ್ ತರುವ ದಿಸೆಯಲ್ಲಿ ‘ಸಿಟ್’ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರವನ್ನು ಕೋರ್ಟ್ ಪ್ರಶ್ನಿಸಿದೆ.
‘ಸಿಟ್’ನ ಶಿಫಾರಸುಗಳ ಮೇಲೆ ಕೇಂದ್ರ ಏನೇನು ಮಾಡಿದೆ ಎಂಬುದನ್ನು ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ವಿವರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನ್ಯಾ.ಎಂ.ಬಿ. ಲೋಕೂರ್ ಮತ್ತು ನ್ಯಾ.ಎ.ಕೆ.ಸಿಕ್ರಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು. ಜೊತೆಗೆ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.
ಈ ತಿಂಗಳ ಕೊನೆಯಲ್ಲಿ ‘ಸಿಟ್’ನ ಮುಂದುವರಿದ ತನಿಖಾ ವರದಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ ಹಿರಿಯ ವಕೀಲ ದುಷ್ಯಂತ್ ದವೆ, ಅಕ್ಟೋಬರ್‌ನಲ್ಲಿ ವರದಿ ಮಂಡನೆಗೆ ಅನುಮತಿ ನೀಡಬೇಕೆಂದು ಕೋರಿದರು. ‘ಸಿಟ್’ನ ಶಿಫಾರಸುಗಳ ಕುರಿತಂತೆ ಕೇಂದ್ರ ಸರಕಾರವು ಕೈಗೊಂಡಿರುವ ಕ್ರಮಗಳನ್ನು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ನ್ಯಾಯಾಲಯಕ್ಕೆ ವಿವರಿಸಬೇಕು ಎಂಬ ‘ಸಿಟ್’ ವಕೀಲರ (ದುಷ್ಯಂತ್ ದವೆ) ಕೋರಿಕೆಯನ್ನು ನ್ಯಾಯಪೀಠ ಈ ಸಂದರ್ಭದಲ್ಲಿ ಒಪ್ಪಿಕೊಂಡಿತು.

ಬಾಬಾಬುಡನ್ ಗಿರಿ ವಿವಾದ: ಸು.ಕೋರ್ಟ್ ಆದೇಶಕ್ಕೆ ಕೋಸೌವೇ ಸ್ವಾಗತ

By varthabharathi On September - 4 - 2015 ADD COMMENTS

ಚಿಕ್ಕಮಗಳೂರು, ಸೆ.3: ಬಾಬಾಬುಡನ್ ಗಿರಿ ವಿವಾದಕ್ಕೆ ಸಂಬಂಧಿಸಿದ ವಿವಾದವನ್ನು ರಾಜ್ಯ ಸರಕಾರವು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ತನ್ನ ಆದೇಶದಲ್ಲಿ ಗುರುವಾರ ತಿಳಿಸಿದ್ದನ್ನು ಸ್ವಾಗತಿಸುವುದಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ತಿಳಿಸಿದರು.
ಈ ಕುರಿತು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ರಾಜ್ಯ ಸರಕಾರ ವಿವಾದಿತ ವಿಷಯಕ್ಕೆ ಸಂಬಂಧಿಸಿದಂತೆ ಜನ ಮೆಚ್ಚುವಂತಹ ತೀರ್ಮಾನ ಕೈಗೊಂಡರೆ ತಾವು ಸ್ವಾಗತಿಸುತ್ತೇವೆ. ಆದರೆ ರಾಜಕೀಯ ಕಾರಣದಿಂದ ವ್ಯತಿರಿಕ್ತ ತೀರ್ಮಾನವನ್ನು ಕೈಗೊಳ್ಳುವುದಾದರೆ ಅದನ್ನು ವಿರೋಧಿಸಲಿದೆ. ಹಾಗೂ ನಂತರ ಅದನ್ನು ಸಂಬಂಧಪಟ್ಟ ಕಡೆಗಳಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.
ಬಾಬಾಬುಡಾನ್‌ಗಿರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ನೇತೃತ್ವದಲ್ಲಿ ರಾಜ್ಯದ ನೂರಾರು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಕೋಮುವಾದಿ ಸಂಘಟನೆಗಳ ವಿರೋಧವನ್ನು ಸಾಟಿ ಇಲ್ಲದಿರುವಂತೆ ಎದುರಿಸಿ ನಿಂತಿದೆ. 2007ರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸಿ 2008ರ ಡಿಸೆಂಬರ್ 1ರಂದು ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಕಳೆದ ಕೆಲವು ತಿಂಗಳುಗಳ ಹಿಂದೆ ಹೈಕೋರ್ಟ್‌ನಲ್ಲಿಯೇ ಈ ಪ್ರೆಕರಣವನ್ನು ಪ್ರಶ್ನಿಸಬಹುದಿತ್ತು. ಎಂದಿತ್ತು, ಆದರೆ ಅಲ್ಲಿ ಪ್ರಶ್ನಿವುದಾದರೆ ತಾವಿಲ್ಲಿಗೆ ಬರುತ್ತಿರಲಿಲ್ಲ. ಇಲ್ಲಿಯೇ ತೀರ್ಮಾನವಾಗಬೇಕು ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು ಎಂದು ವಿವರ ನೀಡಿದರು.

ಕಲಬುರ್ಗಿ ಹತ್ಯೆಗೆ ಸಮರ್ಥನೆ: ರಾಮಸೇನೆ ಸ್ಥಾಪಕ ಪ್ರಸಾದ್ ಅತ್ತಾವರ ಬಂಧನ

By varthabharathi On September - 4 - 2015 ADD COMMENTS

ಮಂಗಳೂರು, ಸೆ.3: ಹಿರಿಯ ಸಾಹಿತಿ, ಖ್ಯಾತ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಯನ್ನು ಸಮರ್ಥಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಅಪರಾಧ ಪತ್ತೆ ದಳ (ಸಿಸಿಬಿ)ದ ಪೊಲೀಸರು ಗುರುವಾರ ರಾಮಸೇನೆಯ ಸ್ಥಾಪಕ ಪ್ರಸಾದ್ ಅತ್ತಾವರನನ್ನು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಪ್ರಸಾದ್ ಅತ್ತಾವರ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹಣೆಗೆ ಗುಂಡಿಕ್ಕಿ ಹತ್ಯೆಗೀಡಾದ ಕಲಬುರ್ಗಿಯವರ ಭಾವಚಿತ್ರವನ್ನಿಟ್ಟು, ‘‘ಕೊನೆಗೂ ಕಲಬುರ್ಗಿಗೆ ತಿಲಕ ಇಟ್ಟಂತಾಗಿದೆ. ಹಿಂದೂ ದೇವರಿಗೆ ಅವಹೇಳನ ಮಾಡಿದವರಿಗೆ ದುರ್ಗತಿ’’ ಎಂಬಿತ್ಯಾದಿ ಅರ್ಥ ಬರುವ ರೀತಿಯಲ್ಲಿ ಕಮೆಂಟ್ಸ್‌ನ್ನು ಪೋಸ್ಟ್ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಬುಧವಾರ ಪ್ರಸಾದ್‌ನ ಮನೆಗೆ ದಾಳಿ ನಡೆಸಿ ಬಂಧಿಸಿ, ವಿಚಾರಣೆಗೊಳಪಡಿಸಿ ಬಳಿಕ ಬಿಡುಗಡೆಗೊಳಿಸಿದ್ದರು.ಇಂದು ಬೆಳಗ್ಗೆ ಮತ್ತೆ ಪ್ರಸಾದ್‌ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿ ಬಂದರು ಪೊಲೀಸರಿಗೆ ಹಸ್ತಾಂತರಿಸಿದ್ದರು. ಈ ಬಗ್ಗೆ ಬಂದರು ಪೊಲೀಸರು ಪ್ರಕರಣ ದಾಖಲಿಸಿ ಪ್ರಸಾದ್‌ನನ್ನು ಸಂಜೆ ಹೊತ್ತಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪಬ್ ದಾಳಿಯ ಪ್ರಮುಖ ಆರೋಪಿ: ಪ್ರಸಾದ್ ಅತ್ತಾವರ ಮಂಗಳೂರು ನಗರದಲ್ಲಿ ಹಿಂದೆ ನಡೆದ ಪಬ್ ದಾಳಿಯ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೆ, 2010ರಲ್ಲಿ ರವಿಪೂಜಾರಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಒಂದು ವರ್ಷ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ಬಿಡುಗಡೆ ಹೊಂದಿದ್ದ. ಸುಮಾರು ನಾಲ್ಕು ವರ್ಷಗಳ ಕಾಲ ಶ್ರೀ ರಾಮಸೇನೆಯಲ್ಲಿ ಗುರುತಿಸಿಕೊಂಡಿದ್ದ ಪ್ರಸಾದ್ ಅನಂತರ ಪ್ರಮೋದ್ ಮುತಾಲಿಕ್‌ರೊಂದಿಗೆ ಮುನಿಸಿಕೊಂಡು ಪ್ರತ್ಯೇಕವಾಗಿ ರಾಮ ಸೇನೆಯನ್ನು ಸ್ಥಾಪಿಸಿದ್ದ. ಇದೀಗ ಕಳೆದ ಎರಡು ವರ್ಷಗಳಿಂದ ರಾಮ ಸೇನೆಯಲ್ಲಿ ಗರುತಿಸಿಕೊಂಡಿದ್ದಾನೆ. ಈ ಹಿಂದೆ ಬಜರಂಗದಳದ ದ.ಕ. ಜಿಲ್ಲಾಧ್ಯಕ್ಷನಾಗಿದ್ದ ಆತ ಸುಮಾರು ಎಂಟು ವರ್ಷಗಳ ಕಾಲ ಸಂಘ ಪರಿವಾರದ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳ ಆಗಸ್ಟ್ 31ರಂದು ಇದೇ ರೀತಿಯಲ್ಲಿ ಖ್ಯಾತ ಸಾಹಿತಿ ಕಲಬುರ್ಗಿಯ ಹತ್ಯೆಯನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್‌ನಲ್ಲಿ ಸಮರ್ಥಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಬಜರಂಗದಳದ ಸಹ ಸಂಚಾಲಕ ಭುವಿತ್ ಶೆಟ್ಟಿಯನ್ನು ಕೂಡ ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಈತ ಕಲಬುರ್ಗಿಯವರ ಹತ್ಯೆನ್ನು ಸಮರ್ಥಿಸಿದ್ದು ಮಾತ್ರವಲ್ಲದೆ, ಮುಂದಿನ ಗುರಿ ಪ್ರಗತಿಪರ ಚಿಂತಕ ಭಗವಾನ್ ಎಂದು ಬೆದರಿಸಿದ್ದ. ‘‘ಹಿಂದುತ್ವವನ್ನು ಪ್ರಶ್ನಿಸಿದ ಪರಿಣಾಮ ಚಿಂತಕರಿಗೆ ಈ ಗತಿ ಬಂದಿದೆ ಎಂದು ಕಲಬುರ್ಗಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದನು. ಅಂದು ಅನಂತಮೂರ್ತಿ, ಇಂದು ಕಲಬುರ್ಗಿ. ಹಿಂದುತ್ವವನ್ನು ಪ್ರಶ್ನಿಸುವವರೆಲ್ಲರೂ ಇದೇ ರೀತಿ ನಾಯಗಳಂತೆ ಸತ್ತು ಹೋಗುತ್ತಾರೆ. ಹಿಂದುತ್ವವಾದಿಗಳ ಮುಂದಿನ ಗುರಿ ಪ್ರಗತಿಪರ ಚಿಂತಕ ಭಗವಾನ್’’ ಎಂದು ಆಂಗ್ಲ ಭಾಷೆಯಲ್ಲಿ ಬೆದರಿಕೆ ಹುಟ್ಟಿಸುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದ.

Copyright © 2012 All rights reserved.