17 December , 2017 Sunday

COASTAL NEWS

COASTAL NEWS

ಪ್ರಧಾನಿ ನರೇಂದ್ರ ಮೋದಿಯವರು 2ನೆ ಬಾರಿ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕಳೆದ ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ಅವರದು ಮೊದಲ ಭಾಷಣ. ಅಂದಿನ ಭಾಷಣವನ್ನು ಮೀಡಿಯಾ ವರ್ಣರಂಜಿತವಾಗಿ ದೇಶದ ಮುಂದಿಟ್ಟಿತ್ತು. ಅವರ ಮಾತುಗಳಲ್ಲಿ ಪೊಸಿಟಿವ್ ಎನರ್ಜಿಯಿತ್ತು ಎಂದು ಮಾಧ್ಯಮಗಳು ವಾಸ್ತು ಭವಿಷ್ಯಕಾರರಂತೆ ಬಣ್ಣಿಸಿದ್ದವು. ಮೋದಿ ಅಭಿಮಾನಿಗಳು ಅವರ ಮಾತಿಗೆ ರೋಮಾಂಚನಗೊಂಡಿದ್ದರು. ಆದರೆ ಅವರ ಮಾತುಗಳಲ್ಲಿ ರೋಚಕತೆಗಳಿದ್ದವೇ ಹೊರತು ತಳಮಟ್ಟದ ಯಾವ ಯೋಜನೆಗಳೂ ಇದ್ದಿರಲಿಲ್ಲ. ಮೇಕ್ ಇನ್ ಇಂಡಿಯಾದಂತಹ ಕನಸುಗಳಲ್ಲಿ ಯಾವ ಸ್ವದೇಶಿತನವೂ ಇದ್ದಿರಲಿಲ್ಲ. ಅವರ ಮಾತುಗಳಲ್ಲಿ ರೋಚಕತೆಗಳಿದ್ದವೇ ಹೊರತು, ಕ್ರಿಯೆಗಳಿರಲಿಲ್ಲ. ಒಂದು ರೀತಿಯಲ್ಲಿ ದೇಶಕ್ಕೆ ಬುದ್ಧಿವಾದವನ್ನು ಕೆಂಪುಕೋಟೆಯಲ್ಲಿ ನಿಂತು ಹೇಳಿದ್ದರು. ಆದರೂ ಆ ಭಾಷಣ ಸರ್ವರ ಮೆಚ್ಚುಗೆಗೆ ಕಾರಣವಾಗಿತ್ತು. ಮೋದಿ ಅಲೆ ದೇಶಾದ್ಯಂತ ಜೀವಂತವಿದ್ದ ಪರಿಣಾಮ ಅವರ ಪ್ರತಿ ಮಾತುಗಳಲ್ಲಿಯೂ ಜನರು ಭರವಸೆಯಿಟ್ಟರು. ಮೋದಿ ಅದೇನೋ ಬದಲಾವಣೆ ಮಾಡುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ಅವರ ಎರಡನೆ ಕೆಂಪುಕೋಟೆಯ ಭಾಷಣ ಠುಸ್ಸೆಂದಿದೆ. ತನ್ನ ಅದೇ ಸವಕಲು ಅಬ್ಬರದಲ್ಲಿ ಭಾಷಣವನ್ನು ಮಾಡಿ ಮುಗಿಸಿದ್ದಾರಾದರೂ, ಸ್ವತಃ ಬಿಜೆಪಿ ಕಾರ್ಯಕರ್ತರನ್ನು ಸೆಳೆಯುವಲ್ಲೂ ಅವರು ವಿಫಲರಾದರು. ತನ್ನೆಲ್ಲ ವೈಫಲ್ಯಗಳನ್ನು, ತನ್ನೆಲ್ಲ ಜನವಿರೋಧಿ ಕಾನೂನುಗಳನ್ನು ಧನಾತ್ಮಕವಾಗಿ ಮಂಡಿಸಲು ಹೊರಟು ವಿಫಲರಾಗಿದ್ದಾರೆ. ಒಂದು ವರ್ಷದಲ್ಲಿ ತಾನೇನು ಮಾಡಿದ್ದೇನೆ ಎನ್ನುವುದನ್ನು ಅವರು ಗಂಟಲು ಹರಿದು ಹೇಳಿದರಾದರೂ, ಅದು ದೇಶದ ಜನಮನವನ್ನು ಮುಟ್ಟುವಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ. ಈ ಬಾರಿ ಮೋದಿಯ ಭಾಷಣ ಚರ್ಚೆಯಾಗಲಿಲ್ಲ ಎನ್ನುವುದೇ ಚರ್ಚೆಗೆ ವಸ್ತುವಾದುದು ವಿಶೇಷ.ಈ ಬಾರಿಯ ಸ್ವಾತಂತ್ರೋತ್ಸವಕ್ಕೆ ಒಂದು ರೀತಿಯ ವಿಷಾದ ಆವರಿಸಿತ್ತು. ಕಳೆದ ಕೆಲವು ದಿನಗಳಿಂದ ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲಗಳು, ಪೋಲಾದ ಕಲಾಪಗಳೇ ಆ ವಿಷಾದಕ್ಕೆ ಕಾರಣ. ಇಡೀ ದೇಶ ಸಂಸತ್ತನ್ನು ಬೆಕ್ಕಸಬೆರಗಾಗಿ ನೋಡುತ್ತಿತ್ತು. ಒಂದೆಡೆ ವಿರೋಧ ಪಕ್ಷಗಳು ಭ್ರಷ್ಟಾಚಾರ ಆರೋಪಕ್ಕಾಗಿ ಸುಷ್ಮಾ ಸ್ವರಾಜ್ ಮತ್ತು ಅವರ ಸಂಗಡಿಗರ ರಾಜೀನಾಮೆಯನ್ನು ಕೇಳುತ್ತಿದ್ದರೆ, ಸರಕಾರ ಜಪ್ಪಯ್ಯ ಎಂದರೂ ಅದಕ್ಕೆ ಒಪ್ಪಿರಲಿಲ್ಲ. ಜೊತೆಗೆ ಸುಷ್ಮಾ ಸ್ವರಾಜ್ ಯಾವ ಮುಜುಗರವೂ ಇಲ್ಲದೆ ಸಂಸತ್ತಿನಲ್ಲಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡರು. ಕೆಂಪುಕೋಟೆಯಲ್ಲಿ ಆ ಕುರಿತಂತೆ ಏನಾದರೂ ವಿವರಗಳು ಹೊರಬೀಳಬಹುದೋ ಎಂಬ ಆಸೆ ಜನರದಾಗಿತ್ತು. ಆದರೆ ಅವರು ತನ್ನ ಭಾಷಣದಲ್ಲಿ, ತಾನು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇನೆ ಎಂದು ದೇಶದ ಜನರನ್ನು ನಂಬಿಸಲು ಯತ್ನಿಸಿದರು. ಅವರ ಭಾಷಣವೇ ಒಂದು ವಿಡಂಬನಾ ರೀತಿಯಲ್ಲಿತ್ತು. ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಅವರ ಲಲಿತ್ ಗೇಟ್ ಹಗರಣ ಮತ್ತು ಚೌಹಾಣ್ ಅವರ ವ್ಯಾಪಂ ಹಗರಣ ದೇಶದ ಮುಖಕ್ಕೆ ರಾಚುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇನೆ ಎಂಬ ಮೋದಿಯ ಮಾತು ಒಂದು ಅಣಕವೇ ಆಗಿತ್ತು. ದೇಶದ ಜನರು ತಲೆತಗ್ಗಿಸಿಕೊಂಡು ಅದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಇಬ್ಬಗೆಯ ಗೊಂದಲ ಕೇವಲ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮಾತ್ರ ಆಗಿರಲಿಲ್ಲ. ಕೋಮುವಾದದ ವಿರುದ್ಧವೂ ಅವರು ಮಾತನಾಡಿದರು. ‘ಜಾತಿವಾದ ಮತ್ತು ಕೋಮುವಾದಗಳಿಗೆ ಈ ದೇಶದಲ್ಲಿ ಸ್ಥಾನವಿಲ್ಲ. ಈ ಸಾಮಾಜಿಕ ಪಿಡುಗುಗಳನ್ನು ಅಭಿವೃದ್ಧಿಯ ಮೂಲಕ ತೊಡೆದು ಹಾಕಬೇಕು’ ಎನ್ನುವ ಗೊಂದಲಗಳ ಹೇಳಿಕೆಯನ್ನು ನೀಡಿದರು. ಕೋಮುವಾದ, ಜಾತಿವಾದ ನಿವಾರಣೆಯಾದರೆ ಅಭಿವೃದ್ಧಿಯಾಗುತ್ತದೆಯೋ ಅಥವಾ ಅಭಿವೃದ್ಧಿಯಾಗುವ ಮೂಲಕ ಕೋಮುವಾದ ನಿವಾರಣೆಯಾಗುತ್ತದೆಯೋ ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟತೆಯಿರಲಿಲ್ಲ. ಕಳೆದ ವರ್ಷದ ಭಾಷಣದಲ್ಲಿ ‘‘ಕೋಮುಹಿಂಸೆ ದೇಶದಲ್ಲಿ ತಾಂಡವವಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ’’ ಎಂಬ ಹೇಳಿಕೆಯನ್ನು ಇದೇ ಮೋದಿಯವರು ನೀಡಿದ್ದರು. ಹೀಗೆ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಮೀರತ್, ದಿಲ್ಲಿ, ಅಸ್ಸಾಂ ಸೇರಿದಂತೆ ಹಲವೆಡೆ ಕೋಮುಗಲಭೆ ಭುಗಿಲೆದ್ದಿತು. ‘ಮರಳಿ ಮಾತೃಧರ್ಮಕ್ಕೆ’ ಎಂಬ ಹೆಸರಿನಲ್ಲಿ ಸಂಘಪರಿವಾರ ನಡೆಸುತ್ತಿರುವ ದಾಂಧಲೆಗಳನ್ನು ಮೋದಿ ವೌನವಾಗಿ ವೀಕ್ಷಿಸತೊಡಗಿದರು. ಇದೀಗ ಮತ್ತೆ ಅದೇ ಕೆಂಪುಕೋಟೆಯಲ್ಲಿ, ಅದೇ ಸವಕಲು ಮಾತುಗಳನ್ನು ಆಡಿದರೆ ಅದು ಕೇಳುವವರ ಎದೆಯೊಳಗೆ ಹೊಸತನ್ನು ಸೃಷ್ಟಿಸುವುದಾದರೂ ಹೇಗೆ?

ಕನಿಷ್ಠ ಸೈನಿಕರ ಸಮಾನ ಶ್ರೇಣಿ, ಸಮಾನ ಪಿಂಚಣಿಯ ಬೇಡಿಕೆಯ ಬಗ್ಗೆಯಾದರೂ ಒಂದು ಸ್ಪಷ್ಟ ನಿರ್ಧಾರವನ್ನು ತಳೆದು ಅವರು ಕೆಂಪುಕೋಟೆಯ ಮೆಟ್ಟಿಲನ್ನು ತುಳಿಯುತ್ತಾರೆ ಎಂದು ಜನರು ಭಾವಿಸಿದ್ದರು. ಆದರೆ ಆ ಕುರಿತಂತೆಯೂ ಒಂದು ಸ್ಪಷ್ಟ ಭರವಸೆಯನ್ನು ಅವರಿಗೆ ನೀಡಲಾಗಲಿಲ್ಲ ‘‘ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜದ ಅಡಿಯಲ್ಲಿ ನಾನು ಮಾಜಿ ಸೈನಿಕರಿಗೆ ಆಶ್ವಾಸನೆಯೊಂದನ್ನು ನೀಡಬಯಸುತ್ತೇನೆ. ಅವರ ಬೇಡಿಕೆಯನ್ನು ನಾವು ತಾತ್ವಿಕವಾಗಿ ಒಪ್ಪಿಕೊಂಡಿದ್ದೇವೆ. ಈ ಕುರಿತು ಕೆಲವು ಮಾತುಕತೆಗಳು ನಡೆದಿವೆ. ಈ ಮಾತುಕತೆಯ ನಡುವೆ ನಾನು ಒಳಿತನ್ನು ನಿರೀಕ್ಷಿಸುತ್ತಿದ್ದೇನೆ’’ ಒಬ್ಬ ಪ್ರಧಾನಿಯಾದವರು ಹೀಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟು ಮಾತನಾಡುತ್ತಿದ್ದರೆ ಅದನ್ನು ನಿವೃತ್ತ ಸೈನಿಕರು ಏನೆಂದು ಅರ್ಥೈಸಿಕೊಳ್ಳಬೇಕು? ‘ಸ್ಟಾರ್ಟ್ ಅಪ್; ಸ್ಟಾಂಡ್ ಅಪ್ ಇಂಡಿಯಾ’ ಎಂಬ ಅಭಿಯಾನಕ್ಕೆ ಅವರು ಚಾಲನೆ ನೀಡಿದ್ದಾರೆ. ಅದರೆ ಆ ಅಭಿಯಾನದ ಸ್ಪಷ್ಟ ಗುರಿ ಸ್ವತಃ ಮೋದಿಗೂ ಗೊತ್ತಿಲ್ಲ. ಪ್ರತಿಯೊಂದು ಬ್ಯಾಂಕ್ ಶಾಖೆ ಕಡೇ ಪಕ್ಷ ಒಬ್ಬ ದಲಿತ ಇಲ್ಲವೇ ಒಬ್ಬ ಆದಿವಾಸಿ ಸ್ಟಾರ್ಟ್ ಅಪ್‌ಗೆ ಸಾಲ ಒದಗಿಸಬೇಕು’ ಎಂದು ಕರೆ ನೀಡುತ್ತಿದ್ದಾರೆ. ಆದರೆ ದೇಶದ ಆರ್ಥಿಕ ನೀತಿಯಿಂದ ರೈತರು ಮತ್ತು ಆದಿವಾಸಿಗಳು ಸಂಪೂರ್ಣ ಬೀದಿಪಾಲಾಗಿರುವಾಗ, ಬ್ಯಾಂಕುಗಳು ಯಾವ ಆಧಾರದ ಮೇಲೆ ರೈತರಿಗೆ ಸಾಲ ನೀಡುತ್ತಿವೆ. ಮೋದಿ ಕೆಂಪುಕೋಟೆಯಲ್ಲಿ ನಿಂತು ಕರೆ ನೀಡಿದರು ಎಂಬ ಒಂದೇ ಕಾರಣಕ್ಕಾಗಿ ಬ್ಯಾಂಕುಗಳು ರೈತರಿಗೆ ಸಾಲಕೊಡುತ್ತವೆಯೇ? ಬಡವರನ್ನು ಮೇಲೆತ್ತಲು ಯಾವ ಕಾರ್ಯಕ್ರಮಗಳನ್ನೂ ಘೋಷಿಸದೆ ‘ಯಾರೂ ಬಡವರಾಗಿಯೇ ಉಳಿಯಲು ಬಯಸುವುದಿಲ್ಲ. ಅದರಿಂದ ಹೊರಬರಲು ಪ್ರಯತ್ನಿಸುತ್ತಾರೆ’ ಎಂಬ ಹೇಳಿಕೆಯಲ್ಲಿ ಬಡವರ ಪರವಾಗಿ ಏನಿದೆ? ಬರೇ ಮಾತುಗಳಲ್ಲೇ ಜನರನ್ನು ಗೊಂದಲಕ್ಕೆ ತಳ್ಳಿ ತಮ್ಮ ಭಾಷಣವನ್ನು ಮುಗಿಸಿ, ದುಬೈಗೆ ಹಾರಿದ್ದಾರೆ.ಒಂದಂತೂ ಸ್ಪಷ್ಟ. ಮೋದಿಯ ಒಂದು ವರ್ಷದ ಆಡಳಿತದಲ್ಲಿ ದೇಶ ಸಂಪೂರ್ಣ ಉದ್ಯಮಿಗಳ, ಹಣವುಳ್ಳವರ ಕೈವಶವಾಗಿವೆ. ಅಮೆರಿಕವೂ ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಭಾರತದ ಮೇಲೆ ಇನ್ನಷ್ಟು ಹೆಚ್ಚು ಹಿಡಿತ ಸಾಧಿಸಿವೆ. ಬಡವರ, ರೈತರ ಹಿತಾಸಕ್ತಿಗಳು ಸಂಪೂರ್ಣ ಬದಿಗೆ ತಳ್ಳಲ್ಪಟ್ಟಿದ್ದು, ಬೃಹತ್ ವಿದೇಶಿ ಕಂಪೆನಿಗಳಿಗಾಗಿ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಸರಕಾರವೇ ಮುಂದೆ ನಿಂತು ಕಾನೂನು ರೂಪಿಸುತ್ತಿದೆ. ದೇಶದ ಜನರಿಗೆ ಇದು ದಿನೇ ದಿನೇ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ. ಕೆಂಪು ಕೋಟೆಯಲ್ಲಿ ನಿಂತು ಮೋದಿ ಆಡಿದ ಮಾತುಗಳು ಇದಕ್ಕೆ ಪುಷ್ಟಿ ನೀಡಿವೆ.

You can leave a response, or trackback from your own site.

Leave a Reply
Copyright © 2012 All rights reserved.